ಶಮಿಗೆ ಅರ್ಜುನ ಪ್ರಶಸ್ತಿ

ನ್ಯೂಜಿಲ್ಯಾಂಡ್ ವಿರುದ್ಧ ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ 54 ಕ್ಕೆ 5 ವಿಕೆಟ್ ಹಾಗೂ ಶ್ರೀಲಂಕಾ ವಿರುದ್ಧ 18 ಕ್ಕೆ 5 ವಿಕೆಟ್ ಹಾಗೂ ಸೆಮಿಫೈನಲ್ ನಲ್ಲಿ 7/57 ವಿಕೆಟ್ ಕಿತ್ತು ದಾಖಲೆ ನಿರ್ಮಿಸಿ ಪಂದ್ಯಪುರುಷ ಪ್ರಶಸ್ತಿಗಳಿಗೆ ಪಾತ್ರರಾಗಿದ್ದ ಮೊಹಮ್ಮದ್ ಶಾಮಿ ಈ ವಿಶ್ವಕಪ್ ನಲ್ಲಿ ಮಾಡಿದ ದಾಖಲೆಗಳು ಒಂದೆರಡಲ್ಲ. ಭಾರತೀಯ ಕ್ರಿಕೆಟ್ ತಂಡದಲ್ಲಿ ಒಂದೇ ವಿಶ್ವಕಪ್ ನಲ್ಲಿ ಅತೀ ಕಡಿಮೆ (17) ಇನ್ಸಿಂಗ್ಸ್ ನಲ್ಲಿ 50 ವಿಕೆಟ್ ಹಾಗೂ ವಿಶ್ವಕಪ್ ನಲ್ಲಿ ಇಲ್ಲಿಯ ತನಕ ಒಂದೇ ಇನ್ಸಿಂಗ್ಸ್ ನಲ್ಲಿ ಏಳು ವಿಕೆಟ್ ಕಿತ್ತ ಬಾಲರ್ ಆಗಿ ಮೊಹಮ್ಮದ್ ಶಮಿ ಹೊರಹೊಮ್ಮಿದ್ದಾರೆ. ಇನ್ನು ವಿಶ್ವಕಪ್ ಪಂದ್ಯಗಳಲ್ಲಿ 8 ಬಾರಿ ನಾಲ್ಕು ವಿಕೆಟ್ ಗೊಂಚಲನ್ನು ಮತ್ತು ನಾಲ್ಕು ಬಾರಿ 5 ವಿಕೆಟ್ ಗೊಂಚಲನ್ನು ಕಿತ್ತು ಹೊಸ ದಾಖಲೆಯನ್ನು ಬರೆದಿದ್ದಾರೆ.
ಉತ್ತರ ಪ್ರದೇಶದಲ್ಲಿ ಹುಟ್ಟಿದ ಶಮಿ ಪಶ್ಚಿಮ ಬಂಗಾಲ ಪರ ರಣಜಿ ಪಂದ್ಯಗಳನ್ನು ಆಡಿ ತಮ್ಮ ಕ್ರಿಕೆಟ್ ಜೀವನವನ್ನು ಆರಂಭಿಸಿದರು. ಅದಕ್ಕಿಂತ ಮೊದಲು ಇವರು ಬಂಗಾಲದ ಮೋಹನ್ ಬಗಾನ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದರು. ಈಡನ್ ಗಾರ್ಡನ್ ನಲ್ಲಿ ಒಮ್ಮೆ ಸೌರವ್ ಗಂಗೂಲಿಯವರಿಗೆ ನೆಟ್ ನಲ್ಲಿ ಬೌಲಿಂಗ್ ಮಾಡಿ ಅವರ ಆಶ್ಚರ್ಯಚಕಿತರನ್ನಾಗಿಸಿದ ಶಮಿ, ಗಂಗೂಲಿಯವರ ಶಿಫಾರಸ್ಸಿನ ಮೇರೆಗೆ ಬಂಗಾಲ ರಣಜಿ ತಂಡಕ್ಕೆ ಆಯ್ಕೆಗೊಂಡಿದ್ದರು. ತಮ್ಮ ಚೊಚ್ಚಲ ಟೆಸ್ಟ್ ಮ್ಯಾಚ್ ನಲ್ಲಿ ವೆಸ್ಟ್ ವಿಂಡಿಸ್ ವಿರುದ್ಧ ಎರಡು ಇನ್ಸಿಂಗ್ಸ್ ನಲ್ಲಿ 118 ರನ್ ನೀಡಿ ಒಂಭತ್ತು ವಿಕೆಟ್ ಪಡೆದ ಶಮಿ ಭಾರತದ ಯಾವುದೇ ಆಟಗಾರ ತಮ್ಮ ಚೊಚ್ಚಲ ಟೆಸ್ಟ್ ಮ್ಯಾಚ್ ನಲ್ಲಿ ಮಾಡಿರದ ದಾಖಲೆಯನ್ನು ನಿರ್ಮಿಸಿದ್ದಾರೆ. ಹೀಗೆ ಹಲವು ದಾಖಲೆಗಳು ಶಮಿ ಹೆಸರಿನಲ್ಲಿದೆ. ಇತ್ತೀಚೆಗೆ ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಆಟಗಾರರ ಡ್ರೆಸ್ಸಿಂಗ್ ರೂಮಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಶಮಿಯವರನ್ನು ಆಲಂಗಿಸಿ ಬೆನ್ನಿಗೆ ಪ್ರೀತಿಯಿಂದ ತಟ್ಟಿರುವುದನ್ನು ಜಗತ್ತೇ ನೋಡಿದೆ. ಇಂತಹ ಶ್ರೇಷ್ಟ ಆಟಗಾರನಿಗೆ ಅರ್ಜುನ ಪ್ರಶಸ್ತಿ ನೀಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಕ್ರೀಡಾಕ್ಷೇತ್ರದ ಅತೀ ದೊಡ್ಡ ಪ್ರಶಸ್ತಿಯಾಗಿರುವ ಅರ್ಜುನ ಪ್ರಶಸ್ತಿಯಿಂದ ಅವರನ್ನು ಪುರಸ್ಕೃರಿಸಿದರೆ ಅದು ಆ ಪ್ರಶಸ್ತಿಯ ಮೌಲ್ಯವನ್ನು ಕೂಡ ಹೆಚ್ಚಿಸಿದಂತೆ ಎನ್ನುವುದು ಈ ಸಾಧಕನ ಅಭಿಮಾನಿಗಳ ಆಶಯ.
Leave A Reply