ಮುಟ್ಟಿಗೆ ವೇತನ ಸಹಿತ ರಜೆ ಬೇಕಿಲ್ಲ – ಸ್ಮೃತಿ ಇರಾನಿ
ಮುಟ್ಟು ಎಂಬುದು ಅಂಗವೈಕಲ್ಯವಲ್ಲ. ಹೀಗಾಗಿ ಹೆಣ್ಣುಮಕ್ಕಳಿಗೆ ವೇತನ ಸಹಿತ ಮುಟ್ಟಿನ ರಜೆ ನೀಡುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಲೋಕಸಭಾ ಅಧಿವೇಶನದಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಇರಾನಿ, ಎಲ್ಲಾ ಕೆಲಸದ ಸ್ಥಳಗಳಲ್ಲಿ ವೇತನ ಸಹಿತ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾವನೆಯೂ ಸರಕಾರದ ಪರಿಗಣನೆಯಲ್ಲಿಲ್ಲ ಎಂದಿದ್ದಾರೆ.
ಋತುಚಕ್ರವು ಮಹಿಳೆಯರ ಕೆಲಸಕ್ಕೆ ಎಂದೂ ಅಡ್ಡಿಯಾಗುವುದಿಲ್ಲ. ಅದು ಮಹಿಳೆಯರ ಜೀವನದ ಒಂದು ಭಾಗ ಹಾಗೂ ಸಹಜ ಪ್ರಕ್ರಿಯೆ ಎಂದು ಹೇಳಿದ ಸ್ಮೃತಿ ಇರಾನಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮುಟ್ಟಿನ ನೈರ್ಮಲ್ಯದ ಕರಡು ನೀತಿಯನ್ನು ಸಿದ್ಧಪಡಿಸಿದೆ ಎಂದರು. ಮಹಿಳೆಗೆ ಮುಟ್ಟು ಎಂದು ಜೀವನದ ಒಂದು ಪಯಣದ ಭಾಗ. ಅದು ಅವಳ ಕೆಲಸಕ್ಕೆ ಅಡ್ಡಿ ಮಾಡಿಲ್ಲ. ದುಡಿಯುವ ಮಹಿಳೆ ಮುಟ್ಟಿನ ಹೆಸರಿನಲ್ಲಿ ರಜೆ ಹಾಕುವುದು ಅರ್ಥಹೀನ, ಇದೀಗ ಮಹಿಳೆಗೂ ಸಮಾನ ಹಕ್ಕುಬೇಕೆಂದು ಹೋರಾಟ ನಡೆಯುತ್ತಿರುವ ಸಮಯದಲ್ಲಿ ಈ ರಜೆಯು ತಾರತಮ್ಯಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಕೇಂದ್ರ ಸಚಿವೆಯ ಈ ಹೇಳಿಕೆಯನ್ನು ಬಾಲಿವುಡ್ ನಟಿ ಕಂಗನಾ ರಾಣಾವತ್ ಕೂಡ ಬೆಂಬಲಿಸಿದ್ದಾರೆ. ಕಂಗನಾ ತನ್ನ ನಿಲುವು ಹಾಗೂ ಅಭಿಪ್ರಾಯವನ್ನು ಹೇಳಲು ಹಿಂಜರಿಯುವುದಿಲ್ಲ. ಮಹಿಳೆಯರು ಕೆಲಸ ಮಾಡದ ಕ್ಷೇತ್ರಗಳೇ ಇಲ್ಲ. ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವುದರಿಂದ ಹಿಡಿದು ಮನೆಯನ್ನು, ಮಕ್ಕಳನ್ನು ನೋಡಿಕೊಳ್ಳುವವರೆಗೆ ಎಲ್ಲವನ್ನು ಆಕೆ ಮಾಡುತ್ತಾಳೆ ಎಂದಿದ್ದಾರೆ.
Leave A Reply