ಸಾಗರ ಶರ್ಮಾ ಡೈರಿಯಲ್ಲಿ ಆತ ಸ್ಪಷ್ಟವಾಗಿ ಬರೆದಿದ್ದ!
ಸಂಸತ್ತಿನ ಒಳಗೆ ಅಧಿವೇಶನದ ನಡೆಯುತ್ತಿರುವ ಹೊತ್ತಿನಲ್ಲಿ ವೀಕ್ಷಕರ ಗ್ಯಾಲರಿಯಿಂದ ಒಳಗೆ ಹಾರಿ ಸ್ಮೋಕ್ ಬಾಂಬ್ ಸಿಡಿಸಿದ ಪ್ರಕರಣದ ಪ್ರಧಾನ ಆರೋಪಿ ಸಾಗರ್ ಶರ್ಮಾ ಮನೆಯಲ್ಲಿ ಆತ ಬರೆಯುತ್ತಿದ್ದ ಡೈರಿ ಭಯೋತ್ಪಾದಕ ನಿಗ್ರಹ ದಳಕ್ಕೆ ಸಿಕ್ಕಿದೆ. ಅದರಲ್ಲಿ ಸಾಗರ್ ಶರ್ಮಾ ತನ್ನ ಮನದ ಭಾವನೆಗಳನ್ನು ಸ್ಪಷ್ಟವಾಗಿ ಹಿಂದಿ ಭಾಷೆಯಲ್ಲಿ ಬರೆದಿದ್ದಾನೆ.
“ಇನ್ನು ಮನೆ ಬಿಟ್ಟು ಹೋಗುವ ಸಮಯ ಬಂದಿದೆ. ಏನಾದರೂ ಹೋರಾಟ ಮಾಡಲೇಬೇಕು. ನನ್ನ ಮನಸ್ಸಿನ ಭಾವನೆಗಳನ್ನು ತಂದೆ, ತಾಯಿಗಳಿಗೆ ತಿಳಿಸಲು ಮನಸ್ಸು ಹಾತೊರೆಯುತ್ತಿದ್ದರೂ ಅವರಿಗೆ ಅದು ಮನವರಿಕೆ ಆಗಲಿಕ್ಕಿಲ್ಲ. ಈ ದಿನಕ್ಕಾಗಿ ಐದು ವರ್ಷಗಳಿಂದ ಯೋಜನೆ ಹಾಕುತ್ತಿದ್ದೇನೆ. ಬೇರೆಯವರಿಂದ ಕಿತ್ತುಕೊಳ್ಳುವವನು ಯಾವತ್ತೂ ಶಕ್ತಿವಂತನಲ್ಲ. ಸುಖ, ಸಂತೋಷ ತ್ಯಾಗ ಮಾಡಲು ತಯಾರಾಗಿರುವವನು ಮಾತ್ರ ಶಕ್ತಿವಂತ” ಹೀಗೆ ಸಾಗರ್ ಶರ್ಮಾ ಬರೆಯುತ್ತಾ ಹೋಗಿದ್ದಾನೆ. ಆ ಇಡೀ ಡೈರಿಯನ್ನು ತನಿಖೆಗೆ ಒಳಪಡಿಸಿರುವ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಆತನ ಯೋಜನೆ, ಯೋಚನೆ ಹಾಗೂ ಷಡ್ಯಂತ್ರಗಳನ್ನು ಅರಿತುಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದಾರೆ.
ಇತನ ಡೈರಿ ಈ ಪ್ರಕರಣಕ್ಕೆ ಮಹತ್ವಪೂರ್ಣ ತಿರುವನ್ನು ನೀಡುವ ಸಾಧ್ಯತೆ ಇದೆ. ಯಾಕೆಂದರೆ ಈ ಘಟನೆಯಲ್ಲಿ ಭಾಗಿಯಾಗಿರುವವರಿಗೂ ಸಾಗರ ಶರ್ಮಾನಿಗೂ ಹಿಂದಿನಿಂದಲೂ ಸಂಬಂಧವಿತ್ತು. ಎಲ್ಲರಿಗೂ ಏನಾದರೂ ಮಾಡಲೇಬೇಕೆಂಬ ಹಪಾಹಪಿ ಇತ್ತು. ಆದರೆ ಏನು ಮಾಡಬೇಕು ಎನ್ನುವ ಸ್ಪಷ್ಟವಾದ ದಾರಿ ಗೊತ್ತಿರಲಿಲ್ಲ. ಇಂತಹ ಮನಸ್ಥಿತಿಯಲ್ಲಿ ಸಿಲುಕಿಕೊಂಡವರು ಸೂಕ್ತ ಗುರು ಸಿಕ್ಕಿದರೆ ಸಮಾಜಕ್ಕೆ ಆಸ್ತಿಯಾಗುತ್ತಾರೆ. ಕೆಟ್ಟ ಸಂಗಡಿಗರು ಸಿಕ್ಕಿದರೆ ಭವಿಷ್ಯವನ್ನೇ ಕಳೆದುಕೊಳ್ಳುತ್ತಾರೆ. ಒಂದು ವೇಳೆ ಈ ಪ್ರಕರಣದಿಂದ ಬಿಡುಗಡೆಯಾಗಿ ಹೊರಗೆ ಬಂದ ಬಳಿಕ ಸಾಗರ್ ಶರ್ಮಾನಿಗೆ ಯಾವುದಾದರೂ ಪಕ್ಷ ವೇದಿಕೆ ನೀಡಬಹುದು. ಅದರಿಂದ ಆತನ ಬೆಳವಣಿಗೆ ಬೇರೆಯದ್ದೇ ರೀತಿಯಲ್ಲಿ ಆಗಬಹುದು. ಯಾಕೆಂದರೆ ನಮ್ಮ ದೇಶದಲ್ಲಿ ದೇಶದ ಸುರಕ್ಷತೆಗಿಂತ ರಾಜಕೀಯ ಲಾಭವೇ ಕೆಲವರಿಗೆ ಮುಖ್ಯವಾಗಿ ಹೋಗಿರುತ್ತದೆ!
Leave A Reply