ನನ್ನ ದೂರು ಏನಿತ್ತು…
ಮಾಡಬೇಕಲ್ಲ ಎಂದು ಮಾಡಿದರೆ ಹೀಗೆ ಆಗುವುದು…
ಜನತಾ ದರ್ಶನ ಎನ್ನುವ ಶಬ್ದಕ್ಕೆ ಅದರದ್ದೇ ಆಗಿರುವ ಪಾವಿತ್ರ್ಯತೆ ಇದೆ. ಅದನ್ನು ಅಷ್ಟೇ ಗೌರವದಿಂದ ಮಾಡಲು ಆಗದಿದ್ದರೆ ಆ ಹೆಸರಿಟ್ಟು ಕಾರ್ಯಕ್ರಮ ಮಾಡಲು ಹೋಗಲೇಬೇಡಿ. ಇಲ್ಲದಿದ್ದರೆ ಕಾಟಾಚಾರ ದರ್ಶನ ಎಂದು ಹೆಸರು ಬದಲಾಯಿಸಿಬಿಡಿ. ಒಂದು ವೇಳೆ ಜನತಾ ದರ್ಶನ ಎಂದು ಮಾಡಿ ಅದರ ಫಾಲೋಅಪ್ ಮಾಡದೇ ಹೋದರೆ ಅದರಿಂದ ಏನೂ ಪ್ರಯೋಜನವಿಲ್ಲ. ಸಿದ್ದು ಸರಕಾರ ಬಂದ ನಂತರ ಜನತಾ ದರ್ಶನ ಮಾಡಲೇ ಇಲ್ಲ ಎಂದು ಪತ್ರಿಕೆಗಳಲ್ಲಿ ವಿಷಯಗಳು ಬಂದಂತೆಲ್ಲಾ ಸಿದ್ದು ಎಚ್ಚರಗೊಂಡಿದ್ರು. ಸೆಪ್ಟೆಂಬರ್ 21 ರಂದು ಬೆಂಗಳೂರಿನಲ್ಲಿ ತಾವು ಮತ್ತು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅಲ್ಲಿನ ಉಸ್ತುವಾರಿ ಸಚಿವರುಗಳು ಜನತಾ ದರ್ಶನ ಮಾಡಬೇಕೆಂಬ ಸೂಚನೆ ನೀಡಿದ್ರು. ಅದರಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಪುರಭವನದಲ್ಲಿ ಜನತಾ ದರ್ಶನ ಹೆಸರಿನಲ್ಲಿ ಅಧಿಕಾರಿಗಳನ್ನು ಕರೆಸಿ ಮಾಡಿದ್ರು. ಅಲ್ಲಿ ನಾನು ಒಂದು ದೂರು ಕೊಟ್ಟಿದ್ದೆ.
ನನ್ನ ದೂರು ಏನಿತ್ತು…
ಅದೇನೆಂದರೆ ಮಂಗಳೂರಿನ ಉರ್ವಾಸ್ಟೋರ್ ನಲ್ಲಿ ಅಂಬೇಡ್ಕರ್ ಭವನ ಇದೆಯಲ್ಲ. ಅದನ್ನು ಸಮಾಜ ಕಲ್ಯಾಣ ಇಲಾಖೆಯ 17 ಕೋಟಿ ಅನುದಾನದಿಂದ ನಿರ್ಮಿಸಲಾಗಿತ್ತು. ಅದರ ನಂತರ ಅದರ ನಿರ್ವಹಣೆಯನ್ನು ಮಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿತ್ತು. ಸರಿಯಾಗಿ ನೋಡಿದರೆ ಅದನ್ನು ಪಾಲಿಕೆ ತೆಗೆದುಕೊಳ್ಳಲೇಬಾರದಿತ್ತು. ಯಾಕೆಂದರೆ ಅಲ್ಲಿರುವ ಕಳಪೆ ಕಾಮಗಾರಿಯೇ ಹಾಗಿತ್ತು. ಭವನದ ಆವರಣ ಗೋಡೆಯಲ್ಲಿ ಬಿರುಕು ಬಿದ್ದಿತ್ತು. ಮುಖ್ಯ ಬಾಗಿಲನ್ನು ಹಾಕಲು ಕಷ್ಟಸಾಧ್ಯವಿತ್ತು. ಅನೇಕ ಕಡೆ ಕಳಪೆ ಕಾಮಗಾರಿ ಆಗಿರುವುದು ಎದ್ದು ಕಾಣುತ್ತಿತ್ತು. ಸೆಪ್ಟೆಂಬರ್ 21 ರಂದು ಮಂಗಳೂರಿನಲ್ಲಿ ನಡೆದ ಜನತಾ ದರ್ಶನದಲ್ಲಿ ಪತ್ರ ಪರಿಶೀಲಿಸಿದ ದಿನೇಶ್ ಗುಂಡೂರಾವ್ ಈ ಬಗ್ಗೆ ಕ್ರಮ ತೆಗೆದುಕೊಳ್ಳಲೇಬೇಕೆಂದು ಸೂಚಿಸಿದ್ದರು. ನಾನು ಜನತಾ ದರ್ಶನದಲ್ಲಿ ದೂರು ಕೊಟ್ಟು ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದಿದ್ದರೂ ಏನು ಆಗಿರಲಿಲ್ಲ. ಅಲ್ಲಿಂದ ಪತ್ರ ಮಹಾನಗರ ಪಾಲಿಕೆಗೆ ಬಂದಿತ್ತು
ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು…
ಇದೆಲ್ಲಾ ಆಗಿ ಡಿಸೆಂಬರ್ 21ಕ್ಕೆ ಮೂರು ತಿಂಗಳಾಗಿದೆ. ಡಿಸೆಂಬರ್ 22 ರಂದು ದಿನೇಶ್ ಗುಂಡೂರಾವ್ ಅವರ ಮತ್ತೊಂದು ಜನತಾ ದರ್ಶನ ಮಂಗಳೂರಿನಲ್ಲಿ ನಡೆಯುವ ಬಗ್ಗೆ ನಿಗದಿಯಾಗಿತ್ತು. 3 ಗಂಟೆಗೆ ಜನತಾ ದರ್ಶನ ಎಂದು ನಿಗದಿಯಾಗಿದ್ದರೂ ಮಾನ್ಯ ಸಚಿವರು ಆಗಮಿಸುವಾಗ ಗಂಟೆ ಐದಾಗಿತ್ತು. ಬಂದವರೇ ಕೊರೊನಾ ಮೀಟಿಂಗ್ ಮಾಡಿದ್ರು. ನಂತರ ಆ ವಿಷಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ 6:40 ಕ್ಕೆ ಹೊರಟು ಹೋದ್ರು. ಕೊರೊನಾ ಮೀಟಿಂಗ್ ಮಾಡಬಾರದು ಎಂದು ಯಾರೂ ಹೇಳುತ್ತಿಲ್ಲ. ಆದರೆ ಅದನ್ನು ಮಾಡಿದ ಮೇಲೆ ಜನತಾ ದರ್ಶನವನ್ನು ಮಾಡಬಹುದಿತ್ತಲ್ಲ. ಅದು ಮೊದಲೇ ನಿಗದಿಯಾಗಿತ್ತಲ್ಲ. ಹಾಗಾದರೆ ಜನತಾ ದರ್ಶನ ಎಂದರೆ ಅಷ್ಟು ನಿರ್ಲಕ್ಷ್ಯವೇ? ಜನರ ಸಮಸ್ಯೆಗೆ ಪರಿಹಾರ ಸೂಚಿಸಬೇಕಾದವರು ಇಷ್ಟು ಬೇಗ ಹೀಗೆ ಮಾಡಿದರೆ ಹೇಗೆ? ಅಷ್ಟಕ್ಕೂ ನಾವು ನಮ್ಮ ಮನೆಯ ಸಮಸ್ಯೆಯನ್ನು ಹೇಳಿಕೊಂಡು ಬರುವುದಿಲ್ಲ. ಸರಕಾರ ಜನರ ತೆರಿಗೆಯ ಹಣವನ್ನು ಖರ್ಚು ಮಾಡಿ ಕಟ್ಟಿದ ಒಂದು ಕಟ್ಟಡ ಕಳಪೆಯಾಗಿದ್ದು, ಅದನ್ನು ಸರಿ ಮಾಡಿ ಎಂದು ನಾನು ಕೇಳಿದ್ದೇ ಬಿಟ್ಟರೆ ನನ್ನ ಮನೆಯ ಕಂಪೌಂಡಿಗೆ ಎರಡು ಗೋಣಿ ಸಿಮೆಂಟ್ ಕೊಡಿ ಕೇಳಿರಲಿಲ್ಲ. ಸರಕಾರಿ ಕಟ್ಟಡವನ್ನು ಕಳಪೆಯಾಗಿ ಕಟ್ಟಿದ್ದ ಗುತ್ತಿಗೆದಾರರನ್ನು, ಸಹಿ ಹಾಕಿ ಬಿಲ್ ಪಾಸ್ ಮಾಡಿದ ಅಧಿಕಾರಿಯನ್ನು ಕರೆಸಿ ಪ್ರಶ್ನಿಸಲು ಧಮ್ ಇಲ್ಲದವರು ಜನತಾ ದರ್ಶನ ಮಾಡಿದರೆಷ್ಟು? ಬಿಟ್ಟರೆಷ್ಟು?
Leave A Reply