ರಾಜ್ಯದ ಅಕಾಡೆಮಿಗಳಿಗೆ 1 ವರ್ಷದಿಂದ ಕೇಳುವವರೇ ಇಲ್ಲ!
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಅರು ತಿಂಗಳು ಕಳೆದಿದೆ. ರಾಜ್ಯದ ನಾಡು – ನುಡಿ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ, ಕಲಾವಿದರನ್ನು ಪ್ರೋತ್ಸಾಹಿಸುವ ಹೊಣೆ ಹೊತ್ತಿರುವ ಅಕಾಡೆಮಿಗಳಿಗೆ ಇಲ್ಲಿಯ ತನಕ ಅಧ್ಯಕ್ಷರುಗಳನ್ನು, ಸದಸ್ಯರನ್ನು ನೇಮಿಸದೇ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣುತ್ತದೆ.
ರಾಜ್ಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ಸಂಗಿತ ನೃತ್ಯ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ, ಲಲಿತಕಲಾ ಅಕಾಡೆಮಿ, ನಾಟಕ ಅಕಾಡೆಮಿ, ಯಕ್ಷಗಾನ ಅಕಾಡೆಮಿ, ತುಳು ಸಾಹಿತ್ಯ ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ, ಬ್ಯಾರಿ ಸಾಹಿತ್ಯ ಅಕಾಡೆಮಿ, ಕೊಡವ ಸಾಹಿತ್ಯ ಅಕಾಡೆಮಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಬಯಲಾಟ ಅಕಾಡೆಮಿ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಆಗಬೇಕಿದೆ.
ಇದರೊಂದಿಗೆ ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗಡಿ ಅಭಿವೃದ್ಧಿ, ಪ್ರಾಧಿಕಾರದ ಅಧ್ಯಕ್ಷ ಮತ್ತು ಸದಸ್ಯರ ನೇಮಕವೂ ಬಾಕಿ ಇದೆ. ಹಿಂದಿನ ಸರಕಾರದ ಅವಧಿ ಮುಗಿಯುವ ನಾಲ್ಕೈದು ತಿಂಗಳ ಮೊದಲೇ ಬಹುತೇಕ ಅಕಾಡೆಮಿಗಳ ಅಧ್ಯಕ್ಷರ ಮತ್ತು ಸದಸ್ಯರ ಅವಧಿ ಮುಕ್ತಾಯಗೊಂಡು ಸಮಿತಿ ಭರ್ಖಾಸ್ತುಗೊಂಡಿತ್ತು. ಈಗ ಅಧ್ಯಕ್ಷರು, ಸದಸ್ಯರಿಲ್ಲದೇ ಬಹುತೇಕ ಅಕಾಡೆಮಿಗಳು ಖಾಲಿ ಹೊಡೆದು ವರ್ಷವಾಗುತ್ತಿದೆ.
ಕಾಂಗ್ರೆಸ್ ಸರಕಾರದಲ್ಲಿ ಈ ನೇಮಕಾತಿಗಳು ಬೇಗ ಆಗಬಹುದು ಎನ್ನುವ ಸಾಹಿತ್ಯಾಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ಸರಕಾರ ಈಗ ಅನೇಕ ಗ್ಯಾರಂಟಿ ಯೋಜನೆ ಜಾರಿ ಮಾಡುವುದರಿಂದ ಆರ್ಥಿಕ ಸಂಕಷ್ಟ ಎದುರಾಗಿರುವುದರಿಂದಲೇ ಅಕಾಡೆಮಿಗಳ ನೇಮಕ ನಿಧಾನ ಆಗುತ್ತಿದೆ. ಹೀಗಾಗಿ ವಿಧಿಇಲ್ಲದೇ ನೇಮಕಾತಿ ಪ್ರಕ್ರಿಯೆ ಮುಂದೂಡಲಾಗುತ್ತಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಈ ವಿಳಂಬದಿಂದಾಗಿ ಕನ್ನಡ ನಾಡಿನ ಕೆಲಸಗಳು ನಿಂತಿರುವುದು ಮಾತ್ರ ನಿಜ.
Leave A Reply