ಕ್ಯಾಪ್ಟನ್ ನಿಧನಕ್ಕೆ ಅಭಿಮಾನಿಗಳ ಕಣ್ಣೀರು
ತಮಿಳು ಚಿತ್ರರಂಗದ ಖ್ಯಾತ ನಟ ವಿಜಯಕಾಂತ್ ಅವರು ನಿಧನರಾಗಿದ್ದಾರೆ. ಡಿಎಂಡಿಕೆ ಪಕ್ಷದ ಸ್ಥಾಪಕರಾಗಿದ್ದ ವಿಜಯಕಾಂತ್ ಅವರ ಮೂಲ ಹೆಸರು ನಾರಾಯಣನ್ ವಿಜಯರಾಜ್ ಅಲಗರಸ್ವಾಮಿ. ಇವರು ತಮಿಳುನಾಡು ವಿಧಾನಸಭೆಯಲ್ಲಿ 2011 ರಿಂದ 2016 ರವರೆಗೆ ಪ್ರತಿಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.
ಕ್ಯಾಪ್ಟನ್ ಎಂದೇ ಪ್ರಖ್ಯಾತರಾಗಿದ್ದ ವಿಜಯಕಾಂತ್ ಇವರನ್ನು ಇತ್ತೀಚೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಾಗ ಕೊರೊನಾ ಸೋಂಕು ಪತ್ತೆಯಾಗಿತ್ತು. ಇವರಿಗೆ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡ ಪರಿಣಾಮ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅನಾರೋಗ್ಯದ ಕಾರಣದಿಂದ ಕಳೆದ ನಾಲ್ಕೈದು ವರ್ಷಗಳಿಂದ ವಿಶ್ರಾಂತಿಯಲ್ಲಿದ್ದ ವಿಜಯಕಾಂತ್ ಅವರು ಪಕ್ಷದ ಜವಾಬ್ದಾರಿಯನ್ನು ಪತ್ನಿ ಪ್ರೇಮಲತಾ ಅವರಿಗೆ ಹಸ್ತಾಂತರಿಸಿದ್ದರು.
ಎರಡು ವಾರಗಳ ಹಿಂದೆಯಷ್ಟೇ ಪ್ರೇಮಲತಾ ಅವರನ್ನು ಡಿಎಂಡಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಘೋಷಿಸಲಾಗಿತ್ತು. ವಿಜಯಕಾಂತ್ ನಿಧನಕ್ಕೆ ಪ್ರಧಾನಿ ಮೋದಿಯವರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. 71 ವರ್ಷ ವಯಸ್ಸಿನ ವಿಜಯಕಾಂತ್ ಅವರು ಸುಮಾರು 150 ಕ್ಕೂ ಹೆಚ್ಚಿನ ಸಿನೆಮಾಗಳಲ್ಲಿ ವಿಶಿಷ್ಟ ಪಾತ್ರಗಳಿಂದ ಅಭಿಮಾನಿಗಳನ್ನು ರಂಜಿಸಿದ್ದಾರೆ. ವಿಜಯಕಾಂತ್ ಅವರು 2006 ರಲ್ಲಿ ಮೊದಲ ಬಾರಿಗೆ ತಮಿಳುನಾಡು ವಿಧಾನಸಭೆಯಲ್ಲಿ ಶಾಸಕರಾಗಿ ಪ್ರವೇಶ ಮಾಡಿದರು. 2014 ರಲ್ಲಿ ಎನ್ ಡಿಎ ಭಾಗವಾಗಿದ್ದ ಡಿಎಂಡಿಕೆ ಅಂತಹ ಯಶಸ್ಸನ್ನು ಕಾಣಲಿಲ್ಲ. ಪಕ್ಷದಲ್ಲಿ ಆಂತರಿಕ ವೈಮನಸ್ಸು, ಅನೇಕ ಹಿರಿಯ ನಾಯಕರ ಬಂಡಾಯದಿಂದ ಪಕ್ಷ ಕಳೆಗುಂದಿತ್ತು.
Leave A Reply