ಜನವರಿ 22 ರಂದು ರಜೆ ನೀಡಲು ಸಿಎಂಗೆ ಶಾಸಕ ಮನವಿ!
ಇದೇ ಜನವರಿ 22 ರಂದು ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರದಲ್ಲಿ ಭಗವಾನ್ ಶ್ರೀರಾಮಚಂದ್ರ ದೇವರನ್ನು ಪರಿವಾರ ಸಹಿತ ಪ್ರತಿಷ್ಠಾಪಿಸಲಾಗುತ್ತದೆ. ಅಂದು ಇಡೀ ದೇಶದಲ್ಲಿ ಸಂಭ್ರಮದ ವಾತಾವರಣ ಇರಲಿದೆ. ಆ ದಿನವನ್ನು ದೀಪಾವಳಿಯ ರೀತಿಯಲ್ಲಿ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ಅಂದು ದೇಶದ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಭಜನೆ, ಪ್ರಸಾದ ವಿತರಣೆ ನಡೆಯಲಿದೆ. ಈ ದಿನ ನಮ್ಮ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸಿಗಲಿದ್ದು, ಅಂದು ಎಲ್ಲರೂ ಏಕಮನಸ್ಸಿನಿಂದ ಅದರಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಸಾವರ್ತಿಕ ರಜೆ ನೀಡುವಂತೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು ಜನರಿಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ. ಪೂಜೆ, ಭಜನಾ ಕಾರ್ಯಕ್ರಮದಲ್ಲಿ ಯುವ ಜನತೆ ಭಾಗಿಯಾಗಬೇಕು. ಅದಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ರಜೆ ಕೊಡ್ತಾರೋ ಬಿಡ್ತಾರೋ ಅವರಿಗೆ ಬಿಟ್ಟಿದ್ದು ಎಂದು ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ.
ಶ್ರೀರಾಮ ಮಂದಿರದ ಲೋಕಾರ್ಪಣೆಯು ಭಕ್ತರ ಭಾವನಾತ್ಮಕ ಮತ್ತು ಧಾರ್ಮಿಕತೆಯ ಐತಿಹಾಸಿಕ ಕ್ಷಣವಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಈ ಪೂಜ್ಯ ದಿನವನ್ನು ದೇಶಾದ್ಯಂತ ದೇವಸ್ಥಾನ, ಮಂದಿರ, ಸಂಘ ಸಂಸ್ಥೆಗಳು ಮತ್ತು ಮನೆ ಮನೆಗಳಲ್ಲಿ ರಾಮ ಜ್ಯೋತಿ ಬೆಳಗಿಸುವುದರೊಂದಿಗೆ ವಿಶೇಷ ಪೂಜೆಗಳು, ಭಜನಾ ಸಂಕೀರ್ತನೆಗಳು ಹಾಗೂ ಅನ್ನ ಸಂತರ್ಪಣೆಗಳ ಮೂಲಕ ಅತ್ಯಂತ ಸಂಭ್ರಮ ಸಡಗರದಿಂದ ದೀಪಾವಳಿ ಹಬ್ಬದಂದು ಆಚರಿಸಲು ಕೋಟ್ಯಾಂತರ ಶ್ರೀರಾಮ ಭಕ್ತರು ಇಚ್ಛಿಸಿರುತ್ತಾರೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
Leave A Reply