ಅಯೋಧ್ಯೆಗೆ ತಲುಪಿ ದೇವರ ದರ್ಶನದ ತನಕ ಹೇಗಿದೆ ವ್ಯವಸ್ಥೆ..
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ಶ್ರೀ ರಾಮ ಮಂದಿರದಲ್ಲಿ ಶ್ರೀರಾಮ ದೇವರನ್ನು ನೋಡುವ ಕೌತುಕ ನಿಮ್ಮಲ್ಲಿ ಈಗ ಮೂಡಿರಬಹುದು. ಜನವರಿ 22 ರಂದು ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನಡೆಯುವುದರಿಂದ ದೇಶದ 6000 ಗಣ್ಯಾತೀಗಣ್ಯರಿಗೆ ಮಾತ್ರ ಆಹ್ವಾನ ನೀಡಿರುವುದರಿಂದ ಆವತ್ತು ಭಕ್ತಾದಿಗಳು ದೇವಸ್ಥಾನಕ್ಕೆ ಬರದೇ ಮುಂದಿನ ದಿನಗಳಲ್ಲಿ ಆಗಮಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿಯೇ ಹೇಳಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ದೇವಸ್ಥಾನಕ್ಕೆ ಹೋಗಲು ಬಯಸುವವರು ಹೇಗೆ ಅಯೋಧ್ಯೆಗೆ ತೆರಳಬಹುದು ಎನ್ನುವ ಮಾಹಿತಿ ಇಲ್ಲಿದೆ.
ನೀವು ರೈಲಿನಲ್ಲಿ ಹೋಗುವವರಾದರೆ ರೈಲ್ವೆ ನಿಲ್ದಾಣದಿಂದ ಕೇವಲ ಐದು ಕಿಲೋ ಮೀಟರ್ ದೂರದಲ್ಲಿ ರೈಲು ನಿಲ್ದಾಣವಿದೆ. ಇನ್ನು ಲಕ್ನೋ ಹಾಗೂ ದೆಹಲಿ ಸಹಿತ ಆಸುಪಾಸಿನ ಪ್ರದೇಶಗಳಿಂದ ನೇರ ಬಸ್ ಸೇವೆಯ ಮೂಲಕ ಅಯೋಧ್ಯೆಯನ್ನು ತಲುಪಬಹುದು. ಇನ್ನು ನೀವು ವಿಮಾನದಲ್ಲಿ ಪ್ರಯಾಣ ಬೆಳೆಸುವವರಾದರೆ ಅಯೋಧ್ಯೆಯಲ್ಲಿ ನೂತನ ವಿಮಾನ ನಿಲ್ದಾಣವೂ ನಿರ್ಮಾಣವಾಗಿದೆ. ಅದನ್ನು ಇತ್ತೀಚೆಗೆ ಪ್ರಧಾನಿ ಮೋದಿಯವರೇ ಉದ್ಘಾಟಿಸಿರುವುದು ನಮಗೆಲ್ಲಾ ಗೊತ್ತೆ ಇದೆ.
ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಮ ಮಂದಿರಕ್ಕೆ ಹತ್ತು ಕಿಲೋ ಮೀಟರ್ ಅಂತರವಿದೆ. ಪ್ರಸ್ತುತ ದೆಹಲಿ ಮತ್ತು ಅಹಮದಾಬಾದಿನಿಂದ ಅಯೋಧ್ಯೆಗೆ ವಿಮಾನ ಸಂಪರ್ಕಗಳಿವೆ. ಇನ್ನು ದೇಶದ ವಿವಿಧ ಭಾಗಗಳಿಂದ ತೆರಳುವವರು ಲಕ್ನೋ, ಗೋರಖಪುರ ಹಾಗೂ ವಾರಣಾಸಿ ವಿಮಾನ ನಿಲ್ದಾಣಗಳಲ್ಲಿ ಇಳಿದು ಅಲ್ಲಿಂದ ರೈಲು ಮತ್ತು ಬಸ್ ಮೂಲಕ ಅಯೋಧ್ಯೆಯನ್ನು ತಲುಪಬಹುದು.
ಶ್ರೀರಾಮನ ಪ್ರತಿಮೆಯನ್ನು ದೇವಾಲಯದಲ್ಲಿ 30 ಅಡಿ ದೂರದಿಂದ ನೋಡಬಹುದು. ದೇವಾಲಯದ ಪೂರ್ವ ದಿಕ್ಕಿನಿಂದ ಭಕ್ತರು ದರ್ಶನಕ್ಕೆ ಬರುತ್ತಾರೆ. ಅವರು ಸಿಂಹದ್ವಾರದ ಮೂಲಕ ಚಲಿಸಿದ ತಕ್ಷಣ, ರಾಮ ಲಲ್ಲಾನ ದರ್ಶನ ಪಡೆದು ಎಡಕ್ಕೆ ತಿರುಗಿ ಹೊರಗೆ ಹೋಗಬೇಕು.
Leave A Reply