ಭಾರತೀಯ ಸೇನೆ ಬಲಪಡಿಸಲು ಕೇಂದ್ರ ಮಹತ್ತರ ನಿರ್ಧಾರ
ದೆಹಲಿ: ಭಾರತೀಯ ಸೇನೆ ಉಪಾಧ್ಯಕ್ಷರಿಗೆ ಕೇಂದ್ರ ಸರಕಾರ ವಿತ್ತೀಯ ಸ್ವಾತಂತ್ರ್ಯ ನೀಡಿದ ಬೆನ್ನಲ್ಲೇ ಮತ್ತೊಂದು ದಿಟ್ಟ ನಿರ್ಧಾರ ಕೈಗೊಂಡಿದ್ದು, ಸೇನೆಯಲ್ಲಿ ಮಹತ್ತರ ಸುಧಾರಣೆಗೆ ಸರಕಾರ ಮುಂದಾಗಿದೆ.
ಶೇಕಾತ್ಕರ್ ಸಮಿತಿ ಮಾಡಿದ ಶಿಫಾರಸು ಜಾರಿಗೆ ತರಲು ಸರಕಾರ ಮುಂದಾಗಿದ್ದು, ಇದರ ಭಾಗವಾಗಿ ರಕ್ಷಣಾ ಸಚಿವ ಅರುಣ್ ಜೇಟ್ಲಿ ಸೇನೆಯ ಉನ್ನತಾಧಿಕಾರಿಗಳ ಜತೆ ಸಭೆ ಸೇರಿ ಆರಂಭಿಕ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ. ಈ ಬಗ್ಗೆ ರಕ್ಷಣಾ ಸಚಿವಾಲಯ ಒಪ್ಪಿಗೆ ಸೂಚಿಸಿದೆ ಎಂದು ಜೇಟ್ಲಿ ಪ್ರಕಟಣೆ ತಿಳಿಸಿದ್ದಾರೆ.
ಮೊದಲ ಹಂತದ ಭಾಗವಾಗಿ ಸೇನೆಯಲ್ಲಿ ಖಾಲಿ ಇರುವ 57,000 ಅಧಿಕಾರಿಗಳ ಮಟ್ಟದ ಕೆಳಹಂತದ ಹುದ್ದೆ ಭರ್ತಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಇವೆಲ್ಲವನ್ನೂ ಹಂತಹಂತವಾಗಿ ಭರ್ತಿ ಮಾಡಲಾಗುತ್ತದೆ. ಯುದ್ಧಕ್ಕೆ ಸನ್ನದ್ಧವಾಗಿರಲು ಹುದ್ದೆಗಳ ಭರ್ತಿ ಕಡ್ಡಾಯ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.
ಸಮಿತಿಯ ಎಷ್ಟು ಶಿಫಾರಸುಗಳಿಗೆ ಅಭಯ?
ಲೆಫ್ಟಿನೆಂಟ್ ಜನರಲ್ ಡಿ.ಬಿ. ಶೇಕಾತ್ಕಾರ್ ಸಮಿತಿ 2016ರ ಡಿಸೆಂಬರ್‌ಲ್ಲಿ ವರದಿ ರಚಿಸಿ ಸರಕಾರಕ್ಕೆ ಸಲ್ಲಿಸಿದ್ದು 99 ಶಿಫಾರಸುಗಳನ್ನು ರಕ್ಷಣಾ ಸಚಿವಾಲಯ ಪರಿಶೀಲನೆಗೆ ತೆಗೆದುಕೊಂಡಿದೆ. ಇವುಗಳಲ್ಲಿ 65ಕ್ಕೆ ರಕ್ಷಣಾ ಸಚಿವ ಜೇಟ್ಲಿ ಅಭಯ ಸೂಚಿಸಿದ್ದಾರೆ. ಡಿಸೆಂಬರ್ 2019ರ ವೇಳೆಗೆ ಈ ಸುಧಾರಣೆ ಜಾರಿಗೆ ತರಬೇಕು ಎಂದು ಸಚಿವಾಲಯ ತಿಳಿಸಿದೆ.
Leave A Reply