ಅಯೋಧ್ಯೆಗೆ 1 ಲಕ್ಷ ಲಡ್ಡು ಬರುತ್ತಿರುವುದು ಎಲ್ಲಿಂದ ಗೊತ್ತಾ?
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ಉದ್ಘಾಟನೆಗೆ ಬೆರಳೆಣಿಕೆಯ ದಿನಗಳು ಬಾಕಿ ಇವೆ. ಜನವರಿ 22 ರಂದು ನಡೆಯುವ ಉದ್ಘಾಟನಾ ಕಾರ್ಯಕ್ರಮಕ್ಕೆ ಕೊನೆಯ ಹಂತದ ತಯಾರಿಗಳು ನಡೆಯುತ್ತಿವೆ. ದೇಶದ ವಿವಿಧ ಭಾಗಗಳಿಂದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಹಂತದಲ್ಲಿ ಒಂದು ಲಕ್ಷ ಲಡ್ಡುಗಳನ್ನು ತಿರುಪತಿ ತಿರುಮಲ ದೇವಸ್ವಂ ಕಡೆಯಿಂದ ಅಯೋಧ್ಯೆಯ ರಾಮ ಮಂದಿರಕ್ಕೆ ಕಳುಹಿಸಿಕೊಡಲು ಟಿಟಿಡಿ ನಿರ್ಧರಿಸಿದೆ. ಈ ಬಗ್ಗೆ ಮಾತನಾಡಿದ ಟಿಟಿಡಿ ಇದರ ಕಾರ್ಯನಿರ್ವಹಣಾ ಅಧಿಕಾರಿ ಎ ವಿ ಧರ್ಮಾ ರೆಡ್ಡಿಯವರು ಶ್ರೀ ವೆಂಕಟೇಶ್ವರ ದೇವರು ಮತ್ತು ಶ್ರೀ ರಾಮ ದೇವರು ಮಹಾವಿಷ್ಣುವಿನ ಅವತಾರವಾಗಿದ್ದಾರೆ.
ಇಡೀ ದೇಶವೇ ಭವ್ಯ ಶ್ರೀರಾಮ ಮಂದಿರದ ಉದ್ಘಾಟನೆಗಾಗಿ ಎದುರು ನೋಡುತ್ತಾ ಇದೆ. ಅಯೋಧ್ಯೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಐತಿಹಾಸಿಕವಾದುದು. ನಾವು ಅಲ್ಲಿ ಭಕ್ತಾದಿಗಳಿಗೆ ತಿರುಪತಿ ಲಡ್ಡುಗಳನ್ನು ಪ್ರಸಾದ ರೂಪವಾಗಿ ಹಂಚಲಿದ್ದೇವೆ ಎಂದು ತಿಳಿಸಿದ್ದಾರೆ. ತಿರುಪತಿ ಲಡ್ಡು ಪ್ರಸಾದಕ್ಕೆ ವಿಶೇಷ ಮಹತ್ವವಿದೆ. ತಿರುಪತಿಗೆ ಬರುವ ಭಕ್ತರು ಈ ಪ್ರಸಾದವನ್ನು ತೆಗೆದುಕೊಂಡು ಊರಿಗೆ ಮರಳಿದ ನಂತರ ತಮ್ಮ ಸಂಬಂಧಿಕರಿಗೆ, ಗೆಳೆಯರಿಗೆ ಹಂಚುವ ವಾಡಿಕೆ ಇದೆ. ತಿರುಪತಿ ಪ್ರಸಾದವನ್ನು ಸೇವಿಸಿದವರು ಅಲ್ಲಿಗೆ ಹೋಗಿಬಂದಷ್ಟೇ ಭಕ್ತಿಭಾವದಿಂದ ಖುಷಿಪಡುತ್ತಾರೆ. ಈಗ ಅಯೋಧ್ಯೆಯಲ್ಲಿ ಜನವರಿ 22 ರಂದು ಕನಿಷ್ಟ 10 ಸಾವಿರ ಜನರು ಉದ್ಘಾಟನೆಯ ದಿನ ಸೇರುವ ನಿರೀಕ್ಷೆ ಇದೆ. ಉಳಿದ ಲಡ್ಡು ಪ್ರಸಾದವನ್ನು ನಂತರದ ದಿನಗಳಲ್ಲಿ ಬರುವ ಭಕ್ತರಿಗಾಗಿ ನೀಡುವ ವ್ಯವಸ್ಥೆ ಆಗಬಹುದು. ಒಟ್ಟಿನಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರಭು ಶ್ರೀ ರಾಮನಿಗಾಗಿ ಏನಾದರೂ ಸೇವೆ ಸಲ್ಲಿಸಿ ಪಾವನರಾಗುವ ಸಂಕಲ್ಪದಲ್ಲಿದ್ದಾರೆ.
Leave A Reply