ಬಿಲ್ಡರ್ಸ್ ಕಾರ್ಪೋರೇಟರ್ ಗಳ ಪಾಲಿನ ಕಾಮಧೇನು!
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹೇಗೆ ಎಂದರೆ ಅಲ್ಲಿ ಬಿಲ್ಡರ್ ಗಳಿಗೆ, ಜಾಹೀರಾತು ಹಾಕುವ ಹೋರ್ಡಿಂಗ್ಸ್ ಸಂಸ್ಥೆಗಳಿಗೆ ಇರುವಷ್ಟು ಮರ್ಯಾದೆ ಜನಸಾಮಾನ್ಯರಿಗೆ ಇಲ್ಲ. ಇಲ್ಲದೇ ಹೋದರೆ ಆಡಳಿತ ನಡೆಸುವವರಿಗೆ ಯಾರಿಗೆ ಟ್ಯಾಕ್ಸ್ ಹಾಕಬೇಕು ಮತ್ತು ಯಾರಿಗೆ ವಿನಾಯಿತಿ ಕೊಡಬೇಕು ಎನ್ನುವ ಸೂಕ್ಷ್ಮತೆ ಇರಬೇಕು. ಕಮರ್ಶಿಯಲ್ ಆಗಿರುವ ಉದ್ಯಮಿಗಳಿಗೆ ನೀವು ಬೇಕಾದಷ್ಟು ಅನುಕೂಲ ಮಾಡಿ ಜನಸಾಮಾನ್ಯರ ಲಂಗು ಲಗಾಮು ಗಟ್ಟಿ ಹಿಡಿದು ಹಿಂಸಿಸಿದರೆ ಅದನ್ನು ತುಘಲಕ್ ಆಡಳಿತ ಎನ್ನಬೇಕಾಗುತ್ತದೆ. ಈ ಗ್ರಹಚಾರ ಪಾಲಿಕೆಯಲ್ಲಿ ಕಾಂಗ್ರೆಸ್ ಇರಲಿ, ಭಾರತೀಯ ಜನತಾ ಪಾರ್ಟಿಯ ಆಡಳಿತ ಇರಲಿ, ಜನಸಾಮಾನ್ಯರ ಹಣೆಬರಹ ಅಷ್ಟೇ ಎನ್ನುವಂತಾಗಿದೆ. ಬೇಕಾದರೆ ನಿಮಗೆ ಉದಾಹರಣೆ ಕೊಡುತ್ತೇನೆ. ನಮ್ಮಲ್ಲಿ ಕಟ್ಟಡ ತೆರಿಗೆ ಅಥವಾ ಮನೆ ತೆರಿಗೆ ಎಂದು ಇದೆ. ಅದನ್ನು ನಾವು ನೀವು ಪ್ರತಿ ವರ್ಷ ಕಟ್ಟುತ್ತಲೇ ಬರುತ್ತಿದ್ದೇವೆ. ಅದನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡಲಾಗುತ್ತದೆ. ಅಂದರೆ ನೀವು ಪ್ರತಿ 3 ವರ್ಷಗಳಿಗೆ 15% ತೆರಿಗೆ ಹೆಚ್ಚು ಕಟ್ಟುತ್ತಲೇ ಇರಬೇಕು. ಕೇಳಿದರೆ ಅದು ಸರಕಾರದ ನಿಯಮ. ಏನೂ ಮಾಡಲು ಆಗಲ್ಲ ಎನ್ನುವ ಉತ್ತರ ಪಾಲಿಕೆಯಿಂದ ಬರುತ್ತದೆ. 15% ಎಂದರೆ ಏನೂ ಚಿಕ್ಕ ವಿಷಯ ಅಲ್ಲ. ನೀವು ಸಣ್ಣಪುಟ್ಟ ಖಾಸಗಿ ಸಂಸ್ಥೆಯಲ್ಲಿ ಸಂಬಳಕ್ಕೆ ಕೆಲಸಕ್ಕೆ ಇರುವವರಾದರೆ ನಿಮಗೆ ಆ ಹೊರೆ ಗೊತ್ತಿರುತ್ತದೆ. ಅದೇ ಮಂಗಳೂರಿನ ಬಿಲ್ಡರ್ ಗಳ ವಿಷಯಕ್ಕೆ ಬನ್ನಿ. ಅವರು ಹೊಸ ವಸತಿ ಸಮುಚ್ಚಯ ಅಥವಾ ಕಮರ್ಶೀಯಲ್ ಕಟ್ಟಡ ಕಟ್ಟಲು ಹೊರಡುವಾಗ ಪಾಲಿಕೆಯಿಂದ ಅನುಮತಿ ಅಥವಾ ಲೈಸೆನ್ಸ್ ಪಡೆಯಬೇಕು. ಅದಕ್ಕಾಗಿ ಹಣ ಕಟ್ಟಿ ಲೈಸೆನ್ಸ್ ಪಡೆಯಬೇಕು. ಆ ಹಣ ಎಷ್ಟು ಜುಜುಬಿ ಎಂದರೆ ಚದರ ಮೀಟರ್ ಗೆ 20 ಪೈಸೆ. ಎಷ್ಟು… ಕೇವಲ 20 ಪೈಸೆ. ನಾವು ಯಾವ ಕಾಲದಲ್ಲಿ ಇದ್ದೇವೆ ಎನ್ನುವುದು ಪಾಲಿಕೆಗೆ ಜ್ಞಾನ ಇಲ್ಲದೇ ಇರಬಹುದು. ಆದರೆ ಶಿಲಾಯುಗದಲ್ಲಿ ಇಲ್ಲ ಎನ್ನುವುದು ಗೊತ್ತಿರಬೇಕಿತ್ತು. ಈಗ 20 ಪೈಸೆ ಎನ್ನುವುದು ಇದೆಯಾ? ಹೋಗಲಿ 50 ಪೈಸೆಯಾದರೂ ಇದೆಯಾ? ಇಲ್ಲ. ಹಾಗಂತ ಬಿಲ್ಡರ್ ಗಳ ವಿಷಯದಲ್ಲಿ ಪಾಲಿಕೆ ಇನ್ನು ಚಲಾವಣೆಯಿಲ್ಲದ ಪೈಸೆಗಳ ಲೆಕ್ಕಾಚಾರದಲ್ಲಿಯೇ ಇದೆ.
ಅವರಿಗೆ ಪೈಸೆ ಜಾಸ್ತಿ ಮಾಡಿಲ್ಲ!
ಇನ್ನು ಬಿಲ್ಡರ್ ಗಳ ನಸೀಬು ನೋಡಿ. ಅವರಿಗೆ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಒಂದು ಪೈಸೆ ಕೂಡ ಫೀಸ್ ಹೆಚ್ಚು ಮಾಡಿಲ್ಲ. ಬಿಲ್ಡರ್ ಗಳು ಒಂದೊಂದು ಕಟ್ಟಡ ಕಟ್ಟಿ ಮಾರುವುದರಿಂದ ಕೋಟ್ಯಾಂತರ ರೂಪಾಯಿ ಲಾಭ ಪಡೆಯುತ್ತಾ ಇರುತ್ತಾರೆ. ಒಂದೊಂದು ಫ್ಲಾಟ್, ಅಂಗಡಿಯಿಂದ ಲಕ್ಷಾಂತರ ರೂಪಾಯಿ ಲಾಭ ಜೇಬಿಗೆ ಇಳಿಸಿಕೊಳ್ಳುತ್ತಾರೆ. ಆದರೂ ಅವರಿಗೆ ಸ್ವಲ್ಪ ಹಣ ಹೆಚ್ಚು ಫೀಸ್ ಹಾಕಲು ಪಾಲಿಕೆಗೆ ಹೃದಯ ತುಂಬಿಬರುತ್ತದೆ. ಫೀಸ್ ಹೆಚ್ಚಿಸುವುದು ಬೇಡಾ ಎಂದೆನಿಸುತ್ತದೆ. ಅದೇ ಜನಸಾಮಾನ್ಯರ ವಿಷಯ ಬಂದಾಗ ಎಲ್ಲಾ ರೂಲ್ಸ್ ನೆನಪಿಗೆ ಬರುತ್ತದೆ. 15% ಜಾಸ್ತಿ ಕಡ್ಡಾಯ ಎನ್ನುವ ಉತ್ತರ ತಕ್ಷಣ ಹೊರಗೆ ಬರುತ್ತೆ.
ಹೋರ್ಡಿಂಗ್ಸ್ ನವರು ಪಾಲಿಕೆಯ ಮಾನಸ ಪುತ್ರರು!
ಇನ್ನು ನೀವು 2024 – 25 ರ ಮನೆ ತೆರಿಗೆಯನ್ನು 2024 ರ ಜುಲೈ ಒಳಗೆನೆ ಕಟ್ಟಿಬಿಡಬೇಕು. ಇಲ್ಲದೇ ಹೋದರೆ ನಂತರದ ಪ್ರತಿ ತಿಂಗಳಿಗೆ 2% ದಂಡ ಕಟ್ಟುತ್ತಲೇ ಇರಬೇಕಾಗುತ್ತದೆ. ಹಾಗಂತ ವರ್ಷ ಮುಕ್ತಾಯವಾಗುವುದು ಮುಂದಿನ ಮಾರ್ಚ್ 31ಕ್ಕೆ. ಆದರೆ ತೆರಿಗೆ ಮಾತ್ರ ಈ ವರ್ಷದ ಜುಲೈ ಒಳಗೆ ಕಟ್ಟದಿದ್ದರೆ ದಂಡ ಆರಂಭ. ಅದೇ ಈ ಪಾಲಿಕೆಯ ಜಾಗದಲ್ಲಿ ಹೋರ್ಡಿಂಗ್ಸ್ ನಿಲ್ಲಿಸಿ ಅದರಲ್ಲಿ ಜಾಹೀರಾತು ಹಾಕುವ ಗುತ್ತಿಗೆಯನ್ನು ಪಡೆದುಕೊಂಡಿರುತ್ತಾರಲ್ಲ. ಅವರು 3 – 4 ವರ್ಷ ಬಾಡಿಗೆನೆ ಕಟ್ಟದಿದ್ದರೂ ಅವರಿಗೆ ಒಂದೂ ರೂಪಾಯಿ ದಂಡ ಹಾಕಲು ಕೂಡ ಪಾಲಿಕೆಗೆ ಧಮ್ ಇಲ್ಲ. ಹೋರ್ಡಿಂಗ್ಸ್ ಗುತ್ತಿಗೆದಾರರು ಪ್ರತಿ ವರ್ಷ ಒಂದೊಂದು ಹೋರ್ಡಿಂಗ್ ನಿಂದಲೂ ಲಕ್ಷಾಂತರ ರೂಪಾಯಿ ಲಾಭ ಮಾಡುತ್ತಲೇ ಇರುತ್ತಾರೆ. ಆದರೆ ಅವರು ತಮಗೆ ಮನಸ್ಸು ಬಂದಾಗ ಫೀಸ್ ಕಟ್ಟುವ ಅವಕಾಶ ಇದೆ. ಅವರ ಎದುರು ಪಾಲಿಕೆಗೆ ಉಸುಕ್ ಧಮ್ ಇಲ್ಲ. ಅದೇ ನಿಮ್ಮ ಮನೆಯ ತೆರಿಗೆ ಆದರೆ ನಾಲ್ಕು ದಿನ ತಡವಾದರೆ ಪಾಲಿಕೆಯಲ್ಲಿ ಪೆನಾಲ್ಟಿ ಗ್ಯಾರಂಟಿ. ಇದೆಲ್ಲವನ್ನು ದಪ್ಪಚರ್ಮದ ಸರಕಾರದ ಮುಂದೆ ಇಟ್ಟು ಜನಸಾಮಾನ್ಯರ ಪರ ಧ್ವನಿ ಎತ್ತುವವರು ಯೋಚಿಸಬೇಕಾಗಿದೆ!
Leave A Reply