ಅಯೋಧ್ಯೆಯ ಪ್ರಾಣಪ್ರತಿಷ್ಟೆಯಲ್ಲಿ ಸುಳ್ಯದ ಪುರೋಹಿತರು!
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಪ್ರತಿಭಾವಂತರಿಗೇನೂ ಕಡಿಮೆ ಇಲ್ಲ. ತಾಲೂಕು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದರೂ ಸುಳ್ಯದ ಅನೇಕರು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾ ಸಾಕಷ್ಟು ಹೆಸರು, ಕೀರ್ತಿ, ಯಶಸ್ಸು ಗಳಿಸಿದ್ದಾರೆ. ಈಗ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾನ ವಿಗ್ರಹದ ಪ್ರಾಣಪ್ರತಿಷ್ಟೆಯ ಧಾರ್ಮಿಕ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸುಳ್ಯ ತಾಲೂಕಿನ ಸಂಸ್ಕೃತ ವಿದ್ವಾಂಸರೊಬ್ಬರು ಆಯ್ಕೆಯಾಗಿದ್ದಾರೆ.
ಜಾಲ್ಸೂರು ಗ್ರಾಮದ ಕೆಮನಹಳ್ಳಿ ಮೂಲದ ಪ್ರಸ್ತುತ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿ.ವಿ.ಯ ಪರಮಚಾರ್ಯ ಗುರುಕುಲದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಕೆ. ಗಣಪತಿ ಭಟ್ ಈ ಅಪೂರ್ವ ಅವಕಾಶ ಪಡೆದುಕೊಂಡಿದ್ದಾರೆ. ರಾಮಲಲ್ಲಾನ ವಿಗ್ರಹ ಪ್ರತಿಷ್ಟೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ನೇಮಕವಾಗಿರುವ 101 ಮಂದಿ ಪ್ರಧಾನ ಪುರೋಹಿತ ತಂಡದಲ್ಲಿ ಗಣಪತಿ ಭಟ್ ಕೂಡ ಒಬ್ಬರು. ಇವರ ನೇತೃತ್ವದಲ್ಲಿರುವ ತಂಡದಲ್ಲಿ 40 ಮಂದಿ ಅರ್ಚಕರು ಇರಲಿದ್ದಾರೆ.
ಸುಳ್ಯದಲ್ಲಿ ಆರಂಭಿಕ ಶಿಕ್ಷಣವನ್ನು ಪೂರೈಸಿ 1978 ರಲ್ಲಿ ಕಂಚಿ ಕಾಮಕೋಟಿ ವಿದ್ಯಾಪೀಠದಲ್ಲಿ ಋಗ್ವೇದದಲ್ಲಿ ಪದವಿ ಶಿಕ್ಷಣವನ್ನು ಪಡೆದರು. ಬಳಿಕ ಮಂತ್ರಾಲಯ ಶ್ರೀ ರಾಘವೇಂದ್ರ ಮಠದಲ್ಲಿ ಶಾಸ್ತ್ರ ಅಧ್ಯಯನ ವಿಷಯದಲ್ಲಿ ಎಂ.ಎ., ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿ.ವಿ.ಯಲ್ಲಿ ಪಿಎಚ್ ಡಿ ಪಡೆದರು. ಮದ್ರಾಸ್ ವಿ.ವಿ.ಯಲ್ಲಿ ಸಂಸ್ಕೃತ ವೇದಾಂತ ಮತ್ತು ನ್ಯಾಯಶಾಸ್ತ್ರದಲ್ಲಿ ಮತ್ತೊಂದು ಎಂ.ಎ ಪದವಿ ಪೂರೈಸಿದ್ದಾರೆ.
ಕಾಲಡಿಯ ಶಂಕರಾಚಾರ್ಯ ವಿ.ವಿ.ಯಲ್ಲಿ 8 ವರ್ಷ ಉಪನ್ಯಾಸಕರಾಗಿ, ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿ.ವಿ.ಯಲ್ಲಿ ಪ್ರೋಫೆಸರ್, ಪರೀಕ್ಷಾಂಗ ಕುಲಸಚಿವ, ಪ್ರಸ್ತುತ ಗುರುಕುಲದ ನಿರ್ದೇಶಕರಾಗಿದ್ದಾರೆ. ಕೇರಳದ ಎಲ್ಲಾ ವಿಶ್ವವಿದ್ಯಾನಿಲಯಗಳ ಪರೀಕ್ಷಾಧಿಕಾರಿಯಾಗಿ, ದೇಶದ ವಿವಿಧ 18 ವಿ.ವಿ.ಗಳ ಪಿ.ಎಚ್.ಡಿ ಮೌಲ್ಯಮಾಪಕರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Leave A Reply