ಕಾಂಗ್ರೆಸ್ ಹಿರಿಯ ನಾಯಕರಿಂದಲೇ ಸರಕಾರದ ವಿರುದ್ಧ ಲಂಚದ ಆರೋಪ!
ಭಾರತೀಯ ಜನತಾ ಪಾರ್ಟಿಯ ಸರಕಾರ ಇದ್ದಾಗ ಅದರ ವಿರುದ್ಧ 40% ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಇನ್ನೂ ಒಂದು ವರ್ಷವೂ ಆಗಿಲ್ಲ. ಎಂಟು ತಿಂಗಳು ಮುಗಿಯುವಷ್ಟರಲ್ಲಿಯೇ ಅವರ ಪಕ್ಷದ ಹಿರಿಯ ಮುಖಂಡರೂ, ಮಾಜಿ ಸಚಿವರೂ ಆಗಿರುವ ಬಿ ಶಿವರಾಂ ಅವರು ತಮ್ಮ ಸರಕಾರದ ಲೋಪದೋಷವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. “ನಾನು ಮುಖ್ಯಮಂತ್ರಿಗಳ ಎದುರು ನೇರವಾಗಿ ಹೇಳಿದೆ. ನಮ್ಮ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಾ ಇದೆ. ಲಂಚ ಎಂದು ಹೇಳಿ ನಾವು ಗೆದ್ದು ಈಗ ಅದಕ್ಕಿಂತ ಹೆಚ್ಚಾಗಿದೆ. ಸರಿಯಾಗಿ ಬುದ್ಧಿ ಹೇಳಿ” ಎಂದು ತಾವು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಳಿ ಮನವಿ ಮಾಡಿದ್ದಾಗಿ ಮಾಜಿ ಸಚಿವ ಶಿವರಾಂ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಅಕ್ರಮಗಳಿಗೆ ಕಡಿವಾಣ ಹಾಕಲು ಒತ್ತಾಯಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಲಂಚ ಸಹಿತ ಇದೆಲ್ಲವೂ ಮೀರಬಾರದು, ಇದರಿಂದ ಪಕ್ಷಕ್ಕೆ, ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಹಾಗೆ ಆಗಬಾರದು ಎನ್ನುವುದು ತಮ್ಮ ಅಪೇಕ್ಷೆ ಅವರು ತಿಳಿಸಿದರು. ಹಾಸನ ಜಿಲ್ಲಾ ಪಂಚಾಯತ್ ಗೆ 13 ಕೋಟಿ ರೂಪಾಯಿ ಹಣ ಏನಾಯಿತು ಎಂದು ತಮ್ಮದೇ ಪಕ್ಷದ ಶಾಸಕ ಶಿವಲಿಂಗೇಗೌಡರ ವಿರುದ್ಧ ಪರೋಕ್ಷ ವಾಗ್ದಾಳಿಯನ್ನು ಮಾಡಿದ್ದಾರೆ.
ಹೀಗೆ ಲೋಕಸಭಾ ಚುನಾವಣೆಗೆ ಬೆರಳೆಣಿಕೆಯ ತಿಂಗಳುಗಳು ಇರುವಾಗ ಕಾಂಗ್ರೆಸ್ ಪಕ್ಷದ ಮಾಜಿ ಸಚಿವರು ಮಾಧ್ಯಮ ಗೋಷ್ಟಿಯಲ್ಲಿ ಹೇಳಿರುವುದು ಭಾರತೀಯ ಜನತಾ ಪಾರ್ಟಿಗೆ ಸಹಜವಾಗಿ ಅಸ್ತ್ರ ಸಿಕ್ಕಂತೆ ಆಗಿದೆ. ವಿಪಕ್ಷದಲ್ಲಿದ್ದಾಗ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಾ ಬರುತ್ತಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ತಾನೇ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಬಿಜೆಪಿ ಆರೋಪ ಮಾಡುತ್ತಾ ಬರುತ್ತಿತ್ತು. ಈಗ ಅದಕ್ಕೆ ಕಾಂಗ್ರೆಸ್ಸಿಗರೇ ಪುರಾವೆ ನೀಡುತ್ತಿರುವುದು ಬಿಜೆಪಿ ಆರೋಪಕ್ಕೆ ಇನ್ನಷ್ಟು ಪುಷ್ಠಿ ಸಿಕ್ಕಂತೆ ಆಗಿದೆ. ಸರಕಾರ ಹಾದಿ ತಪ್ಪಬಾರದು ಎಂದು ತಾವು ಹೀಗೆ ಸಿಎಂ ಮುಂದೆ ಆಗ್ರಹಿಸಿದ್ದಾಗಿ ಶಿವರಾಂ ಹೇಳಿದರೂ ಅವರು ಬಹಿರಂಗವಾಗಿ ಈಗ ಅದನ್ನು ಮಾಧ್ಯಮಗಳ ಮುಂದೆ ಪ್ರಸ್ತಾಪಿಸಿರುವುದು ಸರಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಈ ಬಗ್ಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಅವರು ಶಿವರಾಮ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಸುಳಿವನ್ನು ನೀಡಿದ್ದಾರೆ.
Leave A Reply