ರಾಜ್ಯ, ರಾಷ್ಟ್ರಮಟ್ಟದಲ್ಲಿ ಹುಲಿವೇಷ ಖ್ಯಾತಿಯ ಅಶೋಕ್ ರಾಜ್ ಕಾಡಬೆಟ್ಟು ಇನ್ನಿಲ್ಲ..

ಉಡುಪಿ ಕಾಡಬೆಟ್ಟು ನಿವಾಸಿ “ಟೈಗರ್” ಅಶೋಕ್ ರಾಜ್ ಕೆಲವು ತಿಂಗಳ ಅನಾರೋಗ್ಯದ ಬಳಿಕ ಚೇತರಿಕೆ ಕಾಣದೇ ನಿಧನರಾಗಿದ್ದಾರೆ. ಅವರು ಆರೋಗ್ಯವಂತರಾಗಿ ಬಂದು ಮತ್ತೆ ಹುಲಿವೇಷ ತಂಡದ ಸಾರಥ್ಯವನ್ನು ವಹಿಸುತ್ತಾರೆ ಎನ್ನುವ ಅವರ ಅಸಂಖ್ಯಾತ ಅಭಿಮಾನಿಗಳಿಗೆ ಇದರಿಂದ ಭಾರೀ ನೋವಾಗಿದೆ. 56 ವರ್ಷ ವಯಸ್ಸಾಗಿದ್ದ ಅಶೋಕ್ ರಾಜ್ ಕಾಡಬೆಟ್ಟು ಕಳೆದ ನವರಾತ್ರಿ ಸಮಯದಲ್ಲಿ ಬೆಂಗಳೂರಿನಲ್ಲಿ ಹುಲಿವೇಷ ಕಾರ್ಯಕ್ರಮದಲ್ಲಿ ಹುಲಿವೇಷ ಧರಿಸಿಯೇ ಪಾಲ್ಗೊಂಡಿದ್ದರು. ಅಲ್ಲಿಯೇ ಏಕಾಏಕಿ ಕುಸಿದುಬಿದ್ದಿದ್ದ ಅಶೋಕ್ ರಾಜ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಉಡುಪಿಗೆ ಕರೆತಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹುಲಿವೇಷದ ಕಾರ್ಯಕ್ರಮಗಳಲ್ಲಿ ತಮ್ಮ ತಂಡವನ್ನು ಮುನ್ನಡೆಸುತ್ತಿದ್ದ ಅಶೋಕ್ ರಾಜ್ ಅವರು ಉಡುಪಿಯಲ್ಲಿ ಅಷ್ಟಮಿ, ವಿಟ್ಲಪಿಂಡಿಯ ವೇಳೆ ತಮ್ಮ ತಂಡದ ಜೊತೆಗೆ ಪ್ರದರ್ಶನ ನೀಡುವಾಗ ಅದನ್ನು ನೋಡಲು ಜನ ಮುಗಿಬೀಳುತ್ತಿದ್ದರು. ಕಳೆದ ಮೂರು ದಶಕಗಳಿಂದ ಹುಲಿವೇಷಧಾರಿಯಾಗಿ ಪ್ರಸಿದ್ಧರಾಗಿದ್ದ ಇವರು ಅನೇಕ ಯುವ ಕಲಾವಿದರಿಗೆ ಸ್ಫೂರ್ತಿಯಾಗಿದ್ದರು. ರಾಜ್ಯ ಮತ್ತು ದೇಶಾದ್ಯಂತ ಹುಲಿಕುಣಿತವನ್ನು ಪ್ರಚುರಪಡಿಸುವಲ್ಲಿ ತಮ್ಮದೇ ಕೊಡುಗೆ ನೀಡಿದ್ದರು.
ಅವರ ಮಗಳು ಸುಷ್ಮಾ ಕೂಡ ಅದ್ಭುತವಾಗಿ ಹುಲಿಕುಣಿತವನ್ನು ಮಾಡುವ ಮೂಲಕ ಪ್ರಖ್ಯಾತಿಗಳಿಸಿದ್ದಾರೆ. ಅಶೋಕ್ ರಾಜ್ ಅಂತ್ಯಸಂಸ್ಕಾರ ಉಡುಪಿಯಲ್ಲಿ ನಡೆಯಿತು.