ಬ್ಲ್ಯಾಕ್ ಮೇಲ್ ವಿರುದ್ಧ ನಿಖಿಲ್ ದೂರು..
ಲೋಕಸಭೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅತೀ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ವಿಜಯ ಸಾಧಿಸದೇ ಇದ್ರೆ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿವೆ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹೇಳಿಕೆ ವಿರುದ್ಧ ಜಾತ್ಯಾತಿತ ಜನತಾದಳ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ “ಶಾಸಕ ಬಾಲಕೃಷ್ಣ ಅಮಾಯಕ ನಾಗರಿಕರಿಗೆ ನೇರವಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಕಾಂಗ್ರೆಸ್ ಲೋಕಸಭೆಯಲ್ಲಿ ಸೋತರೆ ಐದು ಗ್ಯಾರಂಟಿಗಳು ಮುಂದುವರೆಯುವುದಿಲ್ಲ ಎಂದು ಹೇಳಿರುವುದು ಶುದ್ಧ ತಪ್ಪು. ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ. ಕಾಂಗ್ರೆಸ್ ಗ್ಯಾರಂಟಿಗಳ ಆಮಿಷ ತೋರಿಸಿ ಗೆದ್ದು ಬಂದಿದೆ. ಈಗ ಕಂಡೀಷನ್ ಹಾಕಿ ಗ್ಯಾರಂಟಿ ನಿಲ್ಲಿಸುತ್ತೇವೆ ಎಂದು ಶಾಸಕರು ಬಹಿರಂಗವಾಗಿ ಘೋಷಣೆ ಮಾಡಿರುವುದು ಸರಿಯಲ್ಲ. ಕಾಂಗ್ರೆಸ್ಸಿಗೆ ಲೋಕಸಭೆಯಲ್ಲಿ ತನ್ನ ಸೋಲು ಈಗಲೇ ಸ್ಪಷ್ಟವಾಗುತ್ತಿದೆ. ಆದ್ದರಿಂದ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳು ಮರುಕಳಿಸುತ್ತಿವೆ. ಇದು ತುಂಬಾ ಸೂಕ್ಷ್ಮ ವಿಚಾರ. ಜನರ ಭಾವನೆಗಳೊಂದಿಗೆ ಚೆಲ್ಲಾಟ ಆಡುತ್ತಿರುವ ಕಾಂಗ್ರೆಸ್ಸಿಗೆ ಜನರ ತಕ್ಕ ಉತ್ತರ ನೀಡಲಿದ್ದಾರೆ. ಸೋಲಿನ ಹತಾಶೆ ಈಗಲೇ ಕಾಂಗ್ರೆಸ್ಸಿಗೆ ಕಾಡುತ್ತಿದೆ. ಇಂತಹ ಹೇಳಿಕೆ ಬಗ್ಗೆ ಚುನಾವಣಾ ಆಯೋಗ ಗಮನಿಸಬೇಕು. ಇದನ್ನು ಸಿಎಂ, ಡಿಸಿಎಂ ಗಮನಿಸಿ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು.
ಒಂದು ವೇಳೆ ಗ್ಯಾರಂಟಿಗಳ ಹೊರತಾಗಿಯೂ ಜನ ಕಾಂಗ್ರೆಸ್ಸಿಗೆ ಮತ ನೀಡದೇ ಸೋಲಿಸಿದರೆ ಜನರಿಗೆ ಗ್ಯಾರಂಟಿಗಳು ಬೇಡಾ ಎಂದು ಪರೋಕ್ಷವಾಗಿ ಹೇಳಿದ ಹಾಗೆ ಆಗುವುದರಿಂದ ಗ್ಯಾರಂಟಿಗಳನ್ನು ನಿಲ್ಲಿಸಬೇಕಾಗುತ್ತದೆ ಎನ್ನುವ ಅರ್ಥದ ಮಾತುಗಳನ್ನು ಇತ್ತೀಚೆಗೆ ಕೆಲವು ಕಾಂಗ್ರೆಸ್ ಶಾಸಕರು ಹೇಳಿರುವುದು ಇತ್ತೀಚೆಗೆ ಸುದ್ದಿಯಾಗುತ್ತಿದೆ. ಆದ್ದರಿಂದ ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಗ್ಯಾರಂಟಿಗಳು ನಿಲ್ಲುತ್ತಾ ಎಂಬ ಭಾವನೆಗಳು ಜನರಲ್ಲಿ ಕಾಣಿಸುತ್ತಿವೆ. ಇನ್ನೊಂದೆಡೆ ಎಲ್ಲಾ ಹಣ ಗ್ಯಾರಂಟಿಗಳಿಗೆ ಹೋಗುತ್ತಿರುವುದರಿಂದ ಅಭಿವೃದ್ಧಿಗೆ ಹಣ ಇಲ್ಲ. ಆದ್ದರಿಂದ ಅಭಿವೃದ್ಧಿ ಆಗುತ್ತಿಲ್ಲ. ಅಭಿವೃದ್ಧಿಯೇ ಆಗದೇ ಇದ್ದರೆ ಕಮೀಷನ್, ಲಂಚ ಎಲ್ಲಿಂದ ಬಂತು. ಒಂದಿಷ್ಟು ವರ್ಗಾವಣೆಯಿಂದ ಆಗುತ್ತಿದೆ ಬಿಟ್ಟರೆ ಬೇರೆ ಅಭಿವೃದ್ಧಿಯಲ್ಲಿ ಕಮೀಷನ್ ಆಗುತ್ತಿಲ್ಲ ಎಂದು ಮಾಜಿ ಸಚಿವ ಬಿ ಶಿವರಾಂ ಇನ್ನೊಂದು ಬಾಂಬ್ ಸರಕಾರದ ಮೇಲೆ ಹಾಕಿದ್ದಾರೆ.
Leave A Reply