ಕಾಂಗ್ರೆಸ್ 40 ಸೀಟ್ ಗೆದ್ರೆ ಅದೇ ದೊಡ್ಡ ವಿಷಯ ಎಂದ ಮಮತಾ ಬ್ಯಾನರ್ಜಿ!
ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಇಂಡಿಯಿಂದ ಒಂದೊಂದೇ ಅಂಗ ಪಕ್ಷಗಳು ಕಾಂಗ್ರೆಸ್ಸಿಗೆ ಟಕ್ಕರ್ ಕೊಡುತ್ತಿರುವ ಘಳಿಗೆಯಲ್ಲಿಯೇ ಮಮತಾ ಬ್ಯಾನರ್ಜಿ ಹೇಳಿರುವ ಮಾತುಗಳು ಕಾಂಗ್ರೆಸ್ಸಿನ ಮಟ್ಟಿಗೆ ದೊಡ್ಡ ಮುಖಭಂಗವೆನ್ನಬಹುದಾಗಿದೆ. ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ 40 ಸೀಟುಗಳನ್ನು ಗೆದ್ದರೆ ಅದೇ ದೊಡ್ಡ ಸಂಗತಿ ಎನ್ನುವ ಅರ್ಥದ ಮಾತುಗಳನ್ನು ಪಶ್ಚಿಮ ಬಂಗಾಲ ಸಿಎಂ ಹೇಳಿದ್ದಾರೆ. 40 ಸೀಟುಗಳನ್ನು ಗೆಲ್ಲುವುದು ಕೂಡ ಡೌಟ್ ಎನ್ನುವ ಟಾಂಗ್ ಕೊಟ್ಟಿರುವ ಮಮತಾ ಹೇಳಿಕೆ ರಾಹುಲ್ ಭಾರತ್ ಜೋಡೋ ಯಾತ್ರೆ ಪಶ್ಚಿಮ ಬಂಗಾಲವನ್ನು ಪ್ರವೇಶಿಸುವ ದಿನವೇ ಬಂದಿರುವ ಕಾಕತಾಳೀಯ ಅಂತೂ ಖಂಡಿತ ಅಲ್ಲ.
ಪಶ್ಚಿಮ ಬಂಗಾಲದ ಮುರ್ಶಿದಾಬಾದ್ ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ ” ಕಾಂಗ್ರೆಸ್ಸಿಗರೇ, ನೀವು ಸ್ಪರ್ಧಿಸಲು ಬಯಸಿರುವ 300 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಟ 40 ರಲ್ಲಾದರೂ ಗೆಲ್ಲುತ್ತೀರಾ ಎನ್ನುವ ಸಂಶಯ ನನಗಿದೆ. ಹೀಗಿರುವಾಗ ನಿಮಗೆ ಇಂತಹ ದುರಂಹಕಾರ ಯಾಕೆ? ನೀವು ಪಶ್ಚಿಮ ಬಂಗಾಲದಲ್ಲಿ ಯಾತ್ರೆ ಮಾಡುತ್ತಿದ್ದೀರಿ. ಸೌಜನ್ಯಕ್ಕಾದರೂ ನಮಗೆ ತಿಳಿಸಬಾರದೇ? ನನಗೆ ಅಧಿಕಾರಿಗಳು ಬಂದು ಮಾಹಿತಿ ನೀಡಿದ ಕಾರಣ ತಿಳಿಯಿತು. ನಾವು ಒಂದೇ
ಒಕ್ಕೂಟದಲ್ಲಿದ್ದೂ ಹೀಗಾದರೆ ಹೇಗೆ? ನಿಮಗೆ ಅಷ್ಟು ಧಮ್ ಇದ್ರೆ ವಾರಣಾಸಿಯಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಸೋಲಿಸಿ. ನೀವು ಹಿಂದೆ ಗೆಲ್ಲುತ್ತಿದ್ದ ಸ್ಥಾನಗಳಲ್ಲಿಯೇ ಈಗ ಸೋಲುವಂತಹ ಸ್ಥಿತಿ ನಿರ್ಮಾಣವಾಗಿದೆ”
“ನೀವು ಉತ್ತರ ಪ್ರದೇಶ, ರಾಜಸ್ಥಾನಗಳಲ್ಲಿ ಗೆಲ್ಲುತ್ತಿಲ್ಲ. ಅಲಹಬಾದ್, ವಾರಣಾಸಿಯಲ್ಲಿ ಮೊದಲು ಗೆದ್ದು ತೋರಿಸಿ. ಆಗ ನಿಮ್ಮ ಪಕ್ಷಕ್ಕೆ ಎಷ್ಟು ತಾಕತ್ತು ಇದೆ ಎಂದು ತಿಳಿಯಲಿದೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇನ್ನು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಪಶ್ಚಿಮ ಬಂಗಾಲದಲ್ಲಿ ಸಂಚರಿಸುತ್ತಿದೆ. ರಾಹುಲ್ ಬೀಡಿ ಕಾರ್ಮಿಕರೊಂದಿಗೆ ಕುಳಿತು ಫೋಟೋ ತೆಗೆಸುತ್ತಿದ್ದಾರೆ. ಇದನ್ನು ವ್ಯಂಗ್ಯವಾಗಿ ಹೇಳಿರುವ ಮಮತಾ ” ಈಗ ಹೊಸ ಶೈಲಿಯ ಮುಖ ಹೊರಗೆ ಬರುತ್ತಿದೆ… ಫೋಟೋ ಶೂಟ್… ಯಾರೂ ಇಲ್ಲಿಯ ತನಕ ಟೀ ಶಾಪಿಗೆ ಹೋಗಿರಲಿಲ್ಲವೋ ಅಂತವರು ಈಗ ಬೀಡಿ ಕಾರ್ಮಿಕರೊಂದಿಗೆ ಕುಳಿತು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ. ವಲಸೆ ಹಕ್ಕಿಗಳು ಇವರು” ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಬೀಡಿ ಕಾರ್ಮಿಕರೊಂದಿಗೆ ವಿಶೇಷವಾಗಿ ಮಹಿಳಾ ಕಾರ್ಮಿಕರೊಂದಿಗೆ ಸಂವಾದ ನಡೆಸುತ್ತಿರುವ ಫೋಟೋಗಳು “ಏಕ್ಸ್”ನಲ್ಲಿ ಹಂಚಿಕೊಂಡ ಬಳಿಕ ಮಮತಾ ಈ ಮಾತುಗಳನ್ನು ಆಡಿದ್ದಾರೆ. ಪಶ್ಚಿಮ ಬಂಗಾಲದಲ್ಲಿ ತೃಣಮೂಲ್ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲು ಚಿಂತನೆ ನಡೆಸಿದ ನಂತರ ಕಾಂಗ್ರೆಸ್ ವಿರುದ್ಧ ಮಮತಾ ಖಾರವಾಗಿ ಮಾತನಾಡುವುದು ಆರಂಭವಾಗಿದೆ.
ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ಸೀಟ್ ಹಂಚಿಕೆ ನಿರ್ಧರಿತವಾಗುವುದು 2019 ಲೋಕಸಭಾ ಕ್ಷೇತ್ರದ ಫಲಿತಾಂಶ ಮತ್ತು 2021 ರ ಪಶ್ಚಿಮ ಬಂಗಾಲ ವಿಧಾನಸಭಾ ಚುನಾವಣೆಯ ಫಲಿತಾಂಶ ಆಧರಿಸಿ ಎಂದು ಹೇಳಲಾಗಿತ್ತು. ಆದರೆ ಕಾಂಗ್ರೆಸ್ ಪಶ್ಚಿಮ ಬಂಗಾಲದಲ್ಲಿ ಐದು ಶೇಕಡಾಗಳಿಗಿಂತ ಕಡಿಮೆ ಮತಗಳನ್ನು ಪಡೆದಿರುವುದರಿಂದ ಸೀಟು ಹಂಚಿಕೆ ಮಾತುಕತೆ ಮುರಿದುಬಿದ್ದಿದೆ.
Leave A Reply