ಕೊಟ್ಟ ಕ್ಷೇತ್ರದಲ್ಲಿ ಶೋಭಿಸದವರಿಗೆ ಅವಕಾಶ..
ನಮಗೆ ನಮ್ಮ ಊರು, ನಮ್ಮ ರಾಜ್ಯಕ್ಕಿಂತ ದೇಶ ಮುಖ್ಯ. ಇದು ಪ್ರತಿಯೊಬ್ಬ ರಾಷ್ಟ್ರೀಯವಾದ ಭಾವನೆ. ಆದ್ದರಿಂದ ಇವತ್ತು ಯಾರೇ ಆಗಲಿ ಬಿಜೆಪಿಯ ಹೆಸರಿನಲ್ಲಿ ನಿಂತರೂ ಕೂಡ ನಾವು ಅವರಲ್ಲಿ ಮೋದಿಯನ್ನು ಕಂಡು ಭಾರತವನ್ನು ಮತ್ತೆ ಗೆಲ್ಲಿಸುತ್ತೇವೆ. ಇದು ನಮಗೆ ಕರ್ತವ್ಯ ಕೂಡ. ರಾಜೀವ್ ಗಾಂಧಿಯ ಕಾಲದಲ್ಲಿ ಕಾಂಗ್ರೆಸ್ಸಿನ ಹೆಸರಿನಲ್ಲಿ ಯಾರು ನಿಂತರೂ ಕೂಡ ಅನಾಯಾಸವಾಗಿ ಆ ವ್ಯಕ್ತಿ ಗೆಲ್ಲುತ್ತಿದ್ದ. ಅದೇ ಕಾಲದ ಪುನರಾವರ್ತನೆ ಈಗ ಬಿಜೆಪಿಗೆ ದಕ್ಕಿದೆ. ಇದು ಮೋದಿಯ ಕಾಲ.
ಮೋದಿಯ ಹೆಸರಿನ ಧೈರ್ಯದಿಂದ ಎಲ್ಲಾ ರಾಜ್ಯಗಳಲ್ಲಿಯೂ ಕೂಡ ಯಾವುದೇ ವ್ಯಕ್ತಿಯನ್ನು ಬದಲಿಸಲು ಕೂಡ ಬಿಜೆಪಿ ಈಗ ಯೋಚಿಸುತ್ತಿಲ್ಲ. ಅದರಲ್ಲೂ ಈ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿರುವುದು ಕರ್ನಾಟಕವೇ ಸರಿ. ಇಲ್ಲಿಯ ಕೆಲಸಕ್ಕೆ ಬಾರದ ಹಳಬ ನಾಯಕರು ತಮಗೆ ಬೇಕಾದವರನ್ನು ತಮ್ಮ ಮೂಗಿನ ನೇರದಲ್ಲಿ ಚಿಂತಿಸಿಕೊಂಡು ಬದಲಾಯಿಸಿಕೊಂಡಿರುವುದು ಇದೇನು ಮೊದಲಲ್ಲ. ಇತ್ತೀಚಿಗೆ ನಡೆದ ವಿಧಾನಸಭೆಯ ಚುನಾವಣೆ ಕೂಡ ಇದಕ್ಕೆ ಸಾಕ್ಷಿ. ಆಗ ಕರ್ನಾಟಕದಲ್ಲಿ ಬಿಜೆಪಿಯನ್ನು ಮುಳುಗಿಸಿದ್ದು ಇದೇ ಇವರ ಹೊಸ ತಂತ್ರ.
ಹೊಸಬರಿಗೆ ಅವಕಾಶವನ್ನು ಕೊಡಬೇಕಾದರೆ ಹಳಬರನ್ನು ಬದಿಗೆ ಸರಿಸಲೇಬೇಕು. ಇದೇ ನ್ಯಾಯದಲ್ಲಿ ಎಲ್ಲರಿಗೂ ಟಿಕೆಟ್ ಸಿಗುವುದು. ಇವತ್ತು ನಾವು ಪ್ರತಾಪಸಿಂಹ ಅಥವಾ ಇನ್ನು ಕೆಲವರಿಗೆ ಅವಕಾಶ ಸಿಗಲಿಲ್ಲ ಎಂದುಕೊಂಡು ಬೇಸರಿಸಿಕೊಂಡಿದ್ದೇವೆ. ಆದರೆ ಅವರು ಕೂಡ ಮತ್ತೊಬ್ಬರ ಟಿಕೆಟ್ ತಪ್ಪಿಸಿ ಬಂದಿದ್ದಾರೆ. ಆದರೆ ಯಾರನ್ನು ಬದಲಿಸಬೇಕು, ಹಾಗೂ ಯಾರನ್ನು ಬದಲಿಸಬಾರದು ಎನ್ನುವ ಸ್ಪಷ್ಟ ನಿರ್ಧಾರವಿಲ್ಲದೆ ತಮಗೆ ಖುಷಿ ಬಂದಂತೆ ಬದಲಿಸುವುದು ಬೇಸರದ ಸಂಗತಿ. ಉಪಯೋಗವಿಲ್ಲದವರಿಗೆ ಉಪಕಾರವಿಲ್ಲದವರಿಗೆ ಮತ್ತೆ ಮತ್ತೆ ಅವಕಾಶ ಕೊಡುವುದಕ್ಕಿಂತ ಅವರನ್ನು ಬದಲಿಸಬಹುದಿತ್ತು. ಅಧಿಕಾರದ ಆಸೆಗಾಗಿ ಬಿಜೆಪಿಯನ್ನು ಬಿಟ್ಟು ಹೋದವರಿಗೆ ಪುನಃ ಮಣೆ ಹಾಕುವುದನ್ನು ಬಿಡಬಹುದಿತ್ತು. ಈ ಮುತ್ಸದ್ದಿ ಮುದುಕ ನಾಯಕರುಗಳಿಗೆ ಬಿಜೆಪಿಯ ತತ್ವ ಹಾಗೂ ಆದರ್ಶಗಳು ಕೇವಲ ಭಾಷಣಕ್ಕೆ ಮಾತ್ರ ಸೀಮಿತ, ಸ್ವಂತಕ್ಕೆ ಅಲ್ಲ.
ಇವತ್ತು ಉಪಯೋಗವಿಲ್ಲದ ಹಾಗೂ ಯಾವುದೆ ಹೇಳಿಕೊಳ್ಳುವ ಸಾಧನೆಯೆನ್ನು ಮಾಡದ, ಅಷ್ಟೇ ಅಲ್ಲದೆ ಬಿಜೆಪಿಯನ್ನು ವಿರೋಧಿಸಿ ಬಾಯಿಬಂದಂತೆ ಮಾತಾಡಿದ ನಾಲಾಯಕರುಗಳು ಅವರ ಕ್ಷೇತ್ರದಲ್ಲಿಯೇ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಇನ್ನು ಕೆಲವರು ಇಲ್ಲಿ ಕಡಿದು ಕಟ್ಟಿಹಾಕಿದ್ದು ಸಾಕು ಎನ್ನುವಂತೆ ಮತ್ತೊಂದು ಕಡೆಗೆ ರವಾನಿಸಲ್ಪಟ್ಟಿದ್ದಾರೆ. ತಿಕ ಬಾಯಿಗೆ ಮಾತ್ರ ಕೆಲಸ ಕೊಟ್ಟ ಎತ್ತುಗಳಿಗೆ ಅವಕಾಶ ಸಿಕ್ಕಿದೆ. ಸಿಕ್ಕಿದ ಕ್ಷೇತ್ರದಲ್ಲಿ ಶೋಭಿಸದ ಮತ್ತೆ ಕೆಲವರು ಸ್ಥಳಾಂತರಗೊಂಡಿದ್ದಾರೆ. ವಿಧಾನಸಭೆಯ ಚುನಾವಣೆಯಲ್ಲಿ ಏನೂ ಮಾತನಾಡದೆ,ಮೌನವಾಗಿ ನಿವೃತ್ತಿ ಘೋಷಿಸಿ ಬದಿಗೆ ಸರಿದು ತನ್ನ ಗೌರವವನ್ನು ಹಾಗೂ ಬಿಜೆಪಿಯ ಮರ್ಯಾದೆಯನ್ನು ಉಳಿಸಿದ ಕಾರಣಕ್ಕಾಗಿಯಾದರೂ ಈಶ್ವರಪ್ಪನ ಮಗನಿಗೆ ಒಂದು ಕ್ಷೇತ್ರವನ್ನು ಕೊಡಬಹುದಿತ್ತು.ಹಾಗೆಯೇ ಕಳೆದ ಹತ್ತು ವರ್ಷದಲ್ಲಿ ರಾಜ್ಯದ ಯಾವ ಸಂಸದನು ಸಾಧಿಸದ ಸಾಧನೆಯನ್ನು ಮಾಡಿದ ಸಿಂಹಕ್ಕೆ ಕರ್ನಾಟಕದ ಒಂದು ಕ್ಷೇತ್ರವು ತೆರೆದುಕೊಳ್ಳಲಿಲ್ಲ. ತೆರೆದುಕೊಳ್ಳದಂತೆ ಜಾಗ್ರತೆ ವಹಿಸಿದ ಹಿರಿಯ ನಾಯಕರಿಗೆ ಧಿಕ್ಕಾರ ಹೇಳಬೇಕು. ವೈಯಕ್ತಿಕವಾದ ಹಾಗೂ ಇನ್ನಿತರ ಯಾವುದೇ ವಿರೋಧಗಳಿರಲಿ ಅದನ್ನು ಬದಿಗಿಟ್ಟು ಕರ್ನಾಟಕದಲ್ಲಿ ಮಾದರಿಯಂತೆ ಮೈಸೂರನ್ನು ಅಭಿವೃದ್ಧಿ ಮಾಡಿದ ಕಾರಣಕ್ಕಾಗಿಯಾದರೂ ಒಂದು ಕ್ಷೇತ್ರವನ್ನು ಕೊಡಬಹುದಿತ್ತು.
ಅಧಿಕಾರ ಪರಂಪರೆಯಾಗಬಾರದು ಹಾಗೂ ಜಾತಿ ಆಧಾರಿತ ರಾಜಕೀಯ ಮಾಡಬಾರದು ಎನ್ನುವುದು ಬಿಜೆಪಿಯ ತತ್ವ. ಈ ಆದರ್ಶದಲ್ಲಿ ಇರುವ ಯುವ ನಾಯಕರನ್ನು ಬದಿಗೆ ಹಾಕಿ ಬಿಜೆಪಿಯನ್ನು ಉಳಿಸಿದ ಹೆಸರಿನಲ್ಲಿ ಬಿಜೆಪಿಯನ್ನು ಕೊಲ್ಲುತ್ತಿದ್ದಾರೆ ಹಿರಿಯ ನಾಯಕರುಗಳು. ಇಂಥವರಿಗೆ ಮಣೆ ಹಾಕುತ್ತಿರುವ ಕೇಂದ್ರ ಈ ವಿಚಾರದಲ್ಲಿ ಎಡವಿದಂತೆ ಕಾಣುತ್ತದೆ. ಇವರು ಕೊಟ್ಟ ವ್ಯಕ್ತಿಗಳಿಗೆ ಮತ ಹಾಕಲು ಮನಸ್ಸಿಲ್ಲದಿದ್ದರೂ ಮೋದಿಯ ಹೆಸರಿನಲ್ಲಿ ನಮಗೆ ವೋಟು ಹಾಕದೆ ನಿವೃತ್ತಿ ಇಲ್ಲ.
ನಮ್ಮ ಈ ಭಾವನೆಯೊಂದಿಗೆ ಆಟ ಆಡುತ್ತಿರುವ ರಾಜ್ಯದ ಹಿರಿಯ ನಾಯಕರುಗಳು, ಹಾಗೂ ಅವರ ಪರಂಪರೆಯವರು ಮುಂದೊಂದು ದಿವಸ ಕಾಂಗ್ರೆಸ್ನ ಪರಂಪರೆಯಂತೆ ನೆಲಗಚ್ಚುವುದರಲ್ಲಿ ಸಂಶಯವಿಲ್ಲ.
ಅಭಿವೃದ್ಧಿ ಮಾಡಿದವರಿಗೆ ಸ್ಥಳಾಂತರದ ಅವಕಾಶವಿಲ್ಲದೆ ಅವರನ್ನು ಚಿವುಟುತ್ತಿದ್ದೀರಿ. ಅಭಿವೃದ್ಧಿ ಮಾಡದಿದ್ದರೂ ಅಭಿಮಾನದ ದೃಷ್ಟಿಯಲ್ಲಿ ಕೆಲವರಿಗೆ ಸ್ಥಳಾಂತರ ಅವಕಾಶವನ್ನು ಕೊಟ್ಟು ಬಿಜೆಪಿಯನ್ನು ಕಲುಷಿತಗೊಳಿಸಿ ಬೆಳೆಸುತ್ತಿದ್ದೀರಿ. ಮಾತೆತ್ತಿದರೆ ಯುವಕರಿಗೆ ಪ್ರೋತ್ಸಾಹ ಕೊಡುವ ಬಿಜೆಪಿ ಈ ವಿಷಯದಲ್ಲಿ ಸೋಲುತ್ತಿದೆ. ಬದಿಗೆ ಸರಿದ ಮುದುಕರ ಮಾತು ಕೇಳುತ್ತಾ ಈ ಬಾರಿ ಹಲವು ಕಡೆ ಹಳೆ ಮುದುಕರಿಗೆ ಮಣೆ ಹಾಕಿದೆ. ಇನ್ನು ಕೆಲವು ಕಡೆ ಮಕ್ಕಳು, ಮೊಮ್ಮಕ್ಕಳಿಗೆ ಅವಕಾಶವನ್ನು ಕೊಟ್ಟಿದೆ. ಅಧಿಕಾರದಾಸೆಗೆ ಮಕ್ಕಳಿಗೆ ಹಾಗೂ ತಮಗೆ ಬೇಕಾದವರಿಗೆ ಅವಕಾಶವನ್ನು ಕೊಡುತ್ತಾ ಸಾಧಕರನ್ನು ಬದಿಗೆ ಸರಿಸುತ್ತಿರುವ ನಿಮ್ಮ ನಿಲುವು ಪಕ್ಷವನ್ನು ಬೆಳೆಸುವಲ್ಲಿ ಸಹಕಾರಿಯಲ್ಲ.
ಅಧಿಕಾರ ಯಾವಾಗಲೂ ಶಾಶ್ವತವಲ್ಲ.ಈ ನೆಲದಲ್ಲಿ ಅಧಿಕಾರ ಅನುಭವಿಸಿದ ಅದೆಷ್ಟೋ ಜನ ಹೆಸರಿಲ್ಲದಂತೆ ಹೋಗಿದ್ದಾರೆ. ಇಂದಲ್ಲ ನಾಳೆ ಈ ಸಾಲಿಗೆ ಸೇರುವುದರಲ್ಲಿ ಸಂಶಯವಿಲ್ಲ. ನಿಸ್ವಾರ್ಥವಾಗಿ ತ್ಯಾಗಭಾವನೆಯಿಂದ ಬದುಕುವವನಿಗೆ ಅವಕಾಶ ತಾನಾಗಿ ಒಲಿದು ಬರುತ್ತದೆ. ಕಾಲ ಅದನ್ನು ನಡೆಸಿಕೊಡುತ್ತದೆ. ಇದರಲ್ಲೂ ಕೂಡ ನಮಗೆ ಮೋದಿಯ ಮೇಲೆಯೆ ನಂಬಿಕೆ ಇರುವುದು. ಕಾಯಬೇಕಷ್ಟೆ.
Leave A Reply