ಡಿವಿ ಕಾಂಗ್ರೆಸ್ ನಿಂದ ಮೈಸೂರು ಅಭ್ಯರ್ಥಿ ಪಕ್ಕಾನಾ?
ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿಗೊಳ್ಳುತ್ತಾರೆ ಎನ್ನುವ ಸುಳಿವು ಆರೇಳು ತಿಂಗಳುಗಳ ಹಿಂದಿನಿಂದಲೇ ಸುಳಿದಾಡುತ್ತಿತ್ತು. ಅದಕ್ಕೆ ಪುಷ್ಟೀಕರಿಸುವಂತೆ ಡಿವಿಎಸ್ ಕೂಡ ತಾವು ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಕೂಡ ಘೋಷಿಸಿದ್ದರು. ಅದಕ್ಕೆ ಸರಿಯಾಗಿ ಬೆಂಗಳೂರು ಉತ್ತರದಿಂದ ಭಾರತೀಯ ಜನತಾ ಪಾರ್ಟಿಯ ವಿವಿಧ ಮುಖಂಡರು ಲೋಕಸಭಾ ಟಿಕೆಟ್ ಗಾಗಿ ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದರು. ಡಿವಿ ರಾಜಕೀಯ ಚುನಾವಣಾ ಸನ್ಯಾಸದ ಸುಳಿವು ಸಿಕ್ಕ ಕೂಡಲೇ ಮೊದಲಿಗೆ ಜಾಗೃತರಾದವರು ಸಿಟಿ ರವಿ.
ಸಿಟಿ ರವಿ ಮೂಲತ: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರಾದರೂ ಯಡಿಯೂರಪ್ಪನವರು ಆ ಕ್ಷೇತ್ರವನ್ನು ಹೇಗಾದರೂ ಮಾಡಿ, ಎಷ್ಟೇ ವಿರೋಧಗಳಿದ್ದರೂ ಶೋಭಾ ಕರಂದ್ಲಾಜೆಯವರಿಗೆ ಕೊಟ್ಟು ಬಿಡುವ ಸಾಧ್ಯತೆ ಇದ್ದ ಕಾರಣ ಯಾವುದೇ ಕಾರಣಕ್ಕೂ ಸೇಫ್ ಆಗಿರಲಿ ಎನ್ನುವ ಕಾರಣಕ್ಕೆ ಸಿಟಿ ರವಿ ಬೆಂಗಳೂರು ಉತ್ತರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಓಡಾಡಿಕೊಂಡು ಅಲ್ಲಿನ ನಾಯಕರ ವಿಶ್ವಾಸ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಪ್ರತಿಬಾರಿ ಹೊರಗಿನ ಮುಖಂಡರೇ ನಮ್ಮ ಕ್ಷೇತ್ರದಲ್ಲಿ ನಿಂತು ಸಂಸದರಾಗುವುದು ಯಾಕೆ, ಒಂದೋ ಡಿವಿಯವರಿಗೆ ಈ ಬಾರಿಯೂ ಟಿಕೆಟ್ ಕೊಡಿ, ಇಲ್ಲದೇ ಹೊಸ ಸ್ಥಳೀಯ ಅಭ್ಯರ್ಥಿಯನ್ನೇ ನೀಡಿ ಎನ್ನುವ ಅಹವಾಲನ್ನು ಮುಂದಿಟ್ಟ ಬೆಂಗಳೂರು ಉತ್ತರದ ಬಿಜೆಪಿ ಮುಖಂಡರು ಈ ಬಾರಿ ಸ್ಥಳೀಯರನ್ನೇ ಇಳಿಸಬೇಕೆಂಬ ಬೇಡಿಕೆಯನ್ನು ರಾಜ್ಯ, ರಾಷ್ಟ್ರ ನಾಯಕರ ಮುಂದಿಟ್ಟಿದ್ದರು. ಯಾವಾಗ ಶೋಭಾ ಅವರಿಗೆ ಉಡುಪಿ- ಚಿಕ್ಕಮಗಳೂರಿನಲ್ಲಿ ತಳಮಟ್ಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಯಿತೋ ಯಡಿಯೂರಪ್ಪನವರು ಶೋಭಾ ಅವರನ್ನು ಬೆಂಗಳೂರು ಉತ್ತರದ ಅಭ್ಯರ್ಥಿಯಾಗಿ ಮಾಡಲು ಹೈಕಮಾಂಡ್ ಮನವೊಲಿಸಿದರು. ಇನ್ನು ಉಡುಪಿ – ಚಿಕ್ಕಮಗಳೂರಿನಿಂದ ಕೋಟಾ ಶ್ರೀನಿವಾಸ್ ಪೂಜಾರಿಯವರ ಹೆಸರನ್ನು ಫೈನಲ್ ಮಾಡಿಸುವಲ್ಲಿ ಯಶಸ್ವಿಯಾದರು. ಆಗ ಸಿಟಿ ರವಿಯವರಿಗೆ ಚಿಕ್ಕಮಗಳೂರು ಕೂಡ ಉಳಿಯಲಿಲ್ಲ, ಬೆಂಗಳೂರು ಉತ್ತರ ಕೂಡ ದಕ್ಕಲಿಲ್ಲ. ಆದರೆ ಸ್ಥಳೀಯ ನಾಯಕರ ಅಪೇಕ್ಷೆಯಂತೆ ಮತ್ತೆ ಸಂಸದನಾಗಲು ತಯಾರು ಮಾಡಿಕೊಂಡಿದ್ದ ಡಿವಿಯವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅವರ ಆಸೆಯನ್ನು ಎನ್ ಕ್ಯಾಶ್ ಮಾಡಿಕೊಂಡಿರುವ ಕಾಂಗ್ರೆಸ್ಸಿಗರು ಡಿವಿಗೆ ಮೈಸೂರು ಟಿಕೆಟ್ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ. ಒಕ್ಕಲಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇರುವ ಮೈಸೂರಿನಲ್ಲಿ ಡಿವಿಯವರನ್ನು ಕಣಕ್ಕೆ ಇಳಿಸಿದರೆ ಲಾಭ ಆಗಬಹುದು ಎನ್ನುವ ಲೆಕ್ಕಾಚಾರ ಸಿದ್ದು ಹಾಗೂ ಡಿಕೆಶಿಯವರದ್ದು. ಈ ವಿಷಯವನ್ನು ಡಿವಿಗೆ ತಿಳಿಸಿರುವ ಸುದ್ದಿ ಮಾಧ್ಯಮಗಳಿಗೆ ತಿಳಿಯುತ್ತಲೇ ಡಿವಿಯವರ ಜನ್ಮದಿನವಾದ ಸೋಮವಾರ ಅವರಿಗೆ ಪ್ರಶ್ನೆ ಮಾಡಿರುವ ಮಾಧ್ಯಮಗಳಿಗೆ ಮಂಗಳವಾರದವರೆಗೆ ಕಾಯಿರಿ ಎನ್ನುವ ಸಂದೇಶವನ್ನು ಡಿವಿಎಸ್ ನೀಡಿದ್ದಾರೆ. ಒಟ್ಟಿನಲ್ಲಿ ಮೈಸೂರು – ಕೊಡಗು ಕ್ಷೇತ್ರ ಮತ್ತೊಂದು ಟ್ವಿಸ್ಟ್ ಗೆ ತಯಾರಾಗಿದೆಯಾ? ಶಿವಮೊಗ್ಗ, ದಾವಣಗೆರೆ, ಮಂಡ್ಯ, ಚಿಕ್ಕಬಳ್ಳಾಪುರದ ಬಳಿಕ ಈಗ ರಾಜ್ಯದ ಲೋಕಸಭಾ ಕ್ಷೇತ್ರಗಳ ರಣರೋಚಕ ಟ್ವಿಸ್ಟ್ ಮೈಸೂರಾ?
Leave A Reply