ನಮಗೆ ಚುನಾವಣೆಗೆ ಹಣ ಇಲ್ಲದಂತೆ ಮಾಡಲಾಗಿದೆ ಎಂದು ರಾಹುಲ್ ಸುದ್ದಿಗೋಷ್ಟಿ!
ನವದೆಹಲಿಯಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ವಯನಾಡು ಸಂಸದ ರಾಹುಲ್ ಗಾಂಧಿ ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿದರು. ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ” ನಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ನಾವು ಪ್ರಚಾರ ನಡೆಸಲು ಸಾಧ್ಯವಿಲ್ಲವಾಗಿದೆ. ನಾವು ನಮ್ಮ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳನ್ನು ಬೆಂಬಲಿಸಲು ಸಾಧ್ಯವಿಲ್ಲ. ನಮ್ಮ ನಾಯಕರು ದೇಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ. ನಮಗೆ ಒಂದು ರೈಲ್ವೆ ಟಿಕೆಟ್ ಖರೀದಿಸಲು ಸಾಧ್ಯವಾಗುತ್ತಿಲ್ಲ. ಚುನಾವಣೆಯ ಮುನ್ನವೇ ನಮ್ಮನ್ನು ಹೀಗೆ ಮಾಡಲಾಗುತ್ತಿದೆ. ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ. ಭಾರತದ ಜನತೆಯ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ” ಎಂದು ಹೇಳಿದ್ದಾರೆ.
ಈ ವಿಷಯದಲ್ಲಿ ಚುನಾವಣಾ ಆಯೋಗ ಕೂಡ ಮಾತನಾಡುತ್ತಿಲ್ಲ. ನ್ಯಾಯಾಲಯಗಳು ಏನೂ ಹೇಳುತ್ತಿಲ್ಲ. ಇದು ನಮ್ಮ ಬ್ಯಾಂಕುಗಳನ್ನು ಮಾತ್ರ ಫ್ರೀಜ್ ಮಾಡಿರುವುದಲ್ಲ. ಇದು ಪ್ರಜಾಪ್ರಭುತ್ವದ ವಿರುದ್ಧ ಕೃತ್ಯ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಾರ್ಟಿಯ ಮುಖಂಡರಾದ ರವಿಶಂಕರ್ ಪ್ರಸಾದ್ ಅವರು ” ದೇಶದ ಮೇಲೆ ತುರ್ತು ಪರಿಸ್ಥಿತಿಯಂತಹ ಕರಾಳ ದಿನಗಳನ್ನು ಹೇರಿದವರು ಈಗ ಅಕೌಂಟ್ ಫ್ರೀಜ್ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಅಕೌಂಟ್ ಫ್ರೀಜ್ ಆದರೆ ದೇಶದ ಅಕೌಂಟ್ ಫ್ರೀಜ್ ಆದಂತೆ ಆಗುತ್ತಾ?” ಎಂದು ತಿರುಗೇಟು ನೀಡಿದ್ದಾರೆ. ಇನ್ನು ಕಾಂಗ್ರೆಸ್ ಮುಖಂಡರಾದ ಸೋನಿಯಾ ಹಾಗೂ ರಾಹುಲ್ ಅವರು ನ್ಯಾಶನಲ್ ಹೆರಾಲ್ಡ್ ಕೇಸಿನಲ್ಲಿ 5000 ಕೋಟಿ ಹಗರಣದಲ್ಲಿ ಆರೋಪಿ 1 ಮತ್ತು 2 ಎಂದು ಬಿಜೆಪಿ ವಕ್ತಾರ ಸಂಬಿತ್ ಮಹಾಪಾತ್ರ ಹೇಳಿದ್ದಾರೆ. ಅದರಲ್ಲಿ ಮಾಡಿದ ಹಣದಿಂದ ಒಂದಲ್ಲ ಎಷ್ಟೋ ಚುನಾವಣೆಗಳನ್ನು ಎದುರಿಸಬಹುದು. ಆದರೆ ಸೋಲಿನ ಭೀತಿಯಿಂದ ಈಗ ಸೋಲನ್ನು ಅಕೌಂಟ್ ಫ್ರೀಜ್ ಮೇಲೆ ಹಾಕುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
Leave A Reply