ರಾಹುಲ್ ವಿರುದ್ಧ ಕೆ ಸುರೇಂದ್ರನ್!
ಕರ್ನಾಟಕ ಮತ್ತು ಕೇರಳದ ಗಡಿಯಲ್ಲಿರುವ ಮಂಜೇಶ್ವರದಲ್ಲಿ 2016 ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಕಾಂಗ್ರೆಸ್ಸಿನ ಅಭ್ಯರ್ಥಿ ಪಿ.ಬಿ.ಅಬ್ದುಲ್ ರಜಾಕ್ ವಿರುದ್ಧ ಕೇವಲ 89 ಮತಗಳಿಂದ ಸೋತಿದ್ದ ಕೆ ಸುರೇಂದ್ರನ್ ಅವರು ಈಗ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಎರಡನೇ ಬಾರಿ ವಯನಾಡಿನಿಂದ ಕಣಕ್ಕೆ ಇಳಿದಿರುವ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ವಿರುದ್ಧ ಸುರೇಂದ್ರನ್ ಸ್ಪರ್ಧಿಸುತ್ತಿದ್ದಾರೆ.
ಇಲ್ಲಿಯವರೆಗೆ ಕಾಂಗ್ರೆಸ್ ಘೋಷಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ರಾಹುಲ್ ಗಾಂಧಿಯವರು ಕೇವಲ ಒಂದು ಸೀಟಿನಿಂದ ಮಾತ್ರ ಸ್ಪರ್ಧಿಸುತ್ತಿದ್ದಾರೆ. 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಉತ್ತರ ಪ್ರದೇಶದ ಅಮೇಠಿ ಹಾಗೂ ಕೇರಳದ ವಯನಾಡು ಎರಡು ಕಡೆಗಳಿಂದ ಸ್ಪರ್ಧೆ ಮಾಡಿ ಅಮೇಠಿಯಲ್ಲಿ ಸೋತು, ವಯನಾಡಿನಲ್ಲಿ ಗೆದ್ದಿದ್ದರು. ಈ ಬಾರಿ ಕೇವಲ ಒಂದೇ ಸೀಟಿನಿಂದ ಸ್ಪರ್ಧಿಸುವುದು ರಾಹುಲ್ ಅವರಿಗಂತೂ ಬಹಳ ಸವಾಲಿನ ಕೆಲಸವಾಗಿದೆ. ಇನ್ನು ಸುರೇಂದ್ರನ್ ಅವರನ್ನು ಕಣಕ್ಕೆ ಇಳಿಸಿ ಭಾರತೀಯ ಜನತಾ ಪಾರ್ಟಿ ರಾಹುಲ್ ಅವರಿಗೆ ಪ್ರಬಲ ಸ್ಪರ್ಧೆ ನೀಡಿದೆ. ಸುರೇಂದ್ರನ್ ಕೇರಳದ ಬಿಜೆಪಿ ಅಧ್ಯಕ್ಷರೂ ಆಗಿದ್ದಾರೆ. 2009 ಮತ್ತು 2014 ರಲ್ಲಿ ಸುರೇಂದ್ರನ್ ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಎರಡೂ ಬಾರಿ ಸಿಪಿಐ (ಎಂ) ಅಭ್ಯರ್ಥಿ ಪಿ ಕರುಣಾಕರನ್ ಅವರ ವಿರುದ್ಧ ಸೋತಿದ್ದರು. 2019 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಂಟೋ ಅಂಟೋನಿ ವಿರುದ್ಧ ಪಥಾನಾಮತ್ತಿಲ್ ಲೋಕಸಭಾ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧೆ ನೀಡಿದ್ದರೂ 84,462 ಮತಗಳ ಅಂತರದಿಂದ ಸೋತಿದ್ದರು.
ಈ ಬಾರಿ ರಾಹುಲ್ ಗಾಂಧಿ ಅವರು ವಯನಾಡು ಕ್ಷೇತ್ರದಲ್ಲಿ ಸುರೇಂದ್ರನ್ ಜೊತೆ ಸಿಪಿಐ ವಿರುದ್ಧವೂ ಸ್ಪರ್ಧೆ ಮಾಡಬೇಕಾಗಿದೆ. ಸಿಪಿಐ ಅಣ್ಣೀ ರಾಜಾ ಅವರನ್ನು ಕಣಕ್ಕೆ ಇಳಿಸಿದೆ.
ಹಾಗೆ ನೋಡಿದರೆ ಇ.0.ಡಿ.ಯಾ ಮೈತ್ರಿಕೂಟದಲ್ಲಿ ಸಿಪಿಐ ಕೂಡ ಅಂಗಪಕ್ಷ. ಆದರೆ ಕೇರಳದಲ್ಲಿ ಸಿಪಿಐಗೆ ಕಾಂಗ್ರೆಸ್ ಶತ್ರು. ಆದ್ದರಿಂದ ಕಮ್ಯೂನಿಸ್ಟರು ರಾಹುಲ್ ಗಾಂಧಿಯವರನ್ನು ಕೇರಳದಿಂದ ಕಣಕ್ಕೆ ಇಳಿಸುವ ಬದಲು ಬೇರೆ ರಾಜ್ಯಗಳಿಂದ ಕಣಕ್ಕೆ ಇಳಿಸಿ ಎಂದು ಸಲಹೆ ನೀಡಿದೆ. ರಾಹುಲ್ ವಯನಾಡು ಕ್ಷೇತ್ರದಿಂದ ಸ್ಪರ್ಧಿಸುವ ಅಗತ್ಯ ಏನಿದೆ? ಅವರು ತಮಿಳುನಾಡು, ತೆಲಂಗಾಣ ಅಥವಾ ಕರ್ನಾಟಕದಿಂದಲೂ ಸ್ಪರ್ಧಿಸಬಹುದಲ್ಲ ಎಂದು ವಯನಾಡು ಸಿಪಿಐ ಅಭ್ಯರ್ಥಿ ಅಣ್ಣಿ ರಾಜಾ ಸಲಹೆ ನೀಡಿದ್ದಾರೆ.
Leave A Reply