ಕಾರ್ಕಳದಲ್ಲಿ ಮಾನವ ಕಳ್ಳಸಾಗಣೆ, ನಾಲ್ಕುವರೆ ಲಕ್ಷಕ್ಕೆ ಮಹಿಳೆ ಖರೀದಿ!
ನಿಮಗೆ ವಿದೇಶಕ್ಕೆ ಹೋಗುವ ಆಸೆ ಇದೆಯಾ? ನಿಮಗೆ ತುಂಬಾ ಹಣ ಗಳಿಸುವ ಗುರಿ ಇದೆಯಾ? ದುಡ್ಡು ಮಾಡಲು ಫಾರಿನ್ ಗೆ ಹೋಗುವುದು ಒಂದೇ ದಾರಿ ಎಂದು ನಿಮಗೆ ಅನಿಸುತ್ತಿದೆಯಾ? ಹಾಗಾದರೆ ನಿಮ್ಮಂತವರನ್ನೇ ಟಾರ್ಗೆಟ್ ಮಾಡಿ ಹಣ ಮಾಡುವ ತಂತ್ರವನ್ನು ಕೆಲವು ಏಜೆನ್ಸಿಗಳು ಮಾಡುತ್ತವೆ.
ಆಕೆ ಜೆಸಿಂತಾ. ಕಾರ್ಕಳದ ನಿವಾಸಿ. ಗಂಡ ತೀರಿಕೊಂಡಿದ್ದಾರೆ. ಮೂವರು ಮಕ್ಕಳೊಂದಿಗೆ ತನ್ನ ಜೀವನ ಸಾಗಬೇಕಾದರೆ ಉದ್ಯೋಗ ಅನಿವಾರ್ಯವಾಗಿತ್ತು. ಸ್ವಲ್ಪ ಹೆಚ್ಚಿನ ಸಂಬಳ ಸಿಕ್ಕಿದರೆ ಒಳ್ಳೆಯದಾಗುತ್ತದೆ ಎನ್ನುವ ಆಸೆ ಎಲ್ಲರಂತೆ ಆಕೆಗೂ ಇತ್ತು. ಅದನ್ನು ಬೇರೆಯವರಲ್ಲಿ ಹೇಳಿದ್ದಳು. ಅದರ ಬಳಿಕ ಒಮ್ಮೆ ಆಕೆಗೆ ಮಂಗಳೂರಿನ ಜೆಮ್ಸ್ ಎನ್ನುವರಿಂದ ಆಫರ್ ಬರುತ್ತದೆ. ನೀವು ಕತಾರ್ ನಲ್ಲಿರುವ ಭಾರತೀಯ ಕುಟುಂಬವೊಂದಕ್ಕೆ ಮಕ್ಕಳ ಪಾಲನೆ ಮಾಡುವ ಕೆಲಸಕ್ಕೆ ಹೋಗಲು ತಯಾರಿದ್ದಿರಾ? ತಿಂಗಳಿಗೆ 25 ಸಾವಿರ ರೂಪಾಯಿ ಸಂಬಳ ಕೇಳಿ ಅವಳು ಕೂಡ ಖುಷಿಗೊಂಡು ವಿಮಾನ ಹತ್ತುತ್ತಾಳೆ. ಮುಂಬೈನಲ್ಲಿ ವಿಮಾನ ಹತ್ತಿ ಎಲ್ಲೋ ಇಳಿದಾಗಲೇ ಅವಳಿಗೆ ಗೊತ್ತಾಗಿತ್ತು. ಅದು ಕತಾರ್ ಅಲ್ಲ, ಸೌದಿ ಎಂದು. ಅಲ್ಲಿಂದ ಅವಳ ಜೀವನ ನರಕವಾಯಿತು.
ಮೂವರು ಮಡದಿಯರು, ಹತ್ತಾರು ಮಕ್ಕಳು, 16 ಗಂಟೆ ದುಡಿತ, ಜೀತ ಮಾಡಿ ಹೈರಾಣವಾಗಿರುವ ಜೆಸಿಂತಾ ಅವರಿಗೆ ಟಿಬಿ ಕಾಯಿಲೆ ಕೂಡ ಬಾಧಿಸಿ ಅವಳಿಗ ಜೀವಂತ ಶವವಾಗಿದ್ದಾಳೆ. ಅವಳಿಗೆ ನಾಲ್ಕುವರೆ ಲಕ್ಷ ಪಾವತಿಸಿ ಖರೀದಿಸಿದಂತೆ ಆಡುತ್ತಿರುವ ಆ ಕುಟುಂಬ ಹಣ ಕೊಟ್ಟಿದ್ದು ಜೇಮ್ಸ್ ಗೆ. ಮುಂಬೈನ ಶಾಬಾಸ್ ಖಾನ್ ಇದರ ರೂವಾರಿ. ಇವರು ಹಣ ನುಂಗಿ ಇಂತಂಹ ನೂರಾರು ಹೆಣ್ಣುಗಳನ್ನು ಅರಬರಿಗೆ ಮಾರಾಟ ಮಾಡಿದ್ದಾರೆ.
ಇಂತಹಾ 20ಕ್ಕೂ ಅಧಿಕ ಸಬ್ ಏಜೆಂಟ್ ಗಳು ಉಡುಪಿ-ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದಾರೆ. ಶಾಬಾಸ್ ಖಾನ್ ಅಂತವರಿಗೆ 25 ಸಾವಿರ ಕೊಟ್ಟು ಮಹಿಳೆಯರನ್ನು ಖರೀದಿ ಮಾಡುತ್ತಾನೆ. ನಂತರ ಅರಬರೊಂದಿಗೆ ಡೀಲ್ ಮಾಡಿ ಲಕ್ಷಾಂತರ ರೂಪಾಯಿ ಗಳಿಸುತ್ತಾನೆ.
ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಟಾನ ಜೆಸಿಂತಾರನ್ನು ಮರಳಿ ಭಾರತಕ್ಕೆ ತರುವ ಬಗ್ಗೆ ತಿಂಗಳುಗಳಿಂದ ಹೋರಾಟ ಮಾಡುತ್ತಿದೆ. ಇವರ ಮನವಿಗೆ ಸ್ಪಂದಿಸಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕೂಡ ಸೂಕ್ರ ಕ್ರಮ ಕೈಗೊಳ್ಳಲು ಸೌದಿಯ ಆಡಳಿತಕ್ಕೆ ಮನವಿ ಮಾಡಿದ್ದಾರೆ. ಸದ್ಯ ಸತತ ಒತ್ತಾಯದ ಬಳಿಕ ಶನಿವಾರ ಜೇಮ್ಸ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಶಾಬಾಸ್ ಖಾನ್ ಬಗ್ಗೆ ಯಾವುದೇ ಕಾರ್ಯಾಚರಣೆ ನಡೆದಿಲ್ಲ. ತಾಯಿಯ ಸಂಕಟ ಗೊತ್ತಾಗಿ ಮಕ್ಕಳು ಆತಂಕಿತರಾಗಿದ್ದಾರೆ. ಆದರೆ ಮಾನವ ಕಳ್ಳ ಸಾಗಣೆ ಮಾತ್ರ ಭಾರತದಿಂದ ಬೇರೆ ರಾಷ್ಟ್ರಕ್ಕೆ ನಿರಾಂತಕವಾಗಿ ನಡೆಯುತ್ತಿದೆ.
Leave A Reply