ಸಂದೇಶಖಾಲಿ ಸಂತ್ರಸ್ತೆಗೆ ಟಿಕೆಟ್ ನೀಡಿ ಶಕ್ತಿ ಸ್ವರೂಪ್ ಎಂದ ಮೋದಿ!
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡ ಷಹಜಹಾನ್ ಹಾಗೂ ಆತನ ಬೆಂಬಲಿಗರ ನಿರಂತರ ದೌರ್ಜನ್ಯದಿಂದ ಬುಗಿಲೆದ್ದ ಆಕ್ರೋಶದ ಕೇಂದ್ರಬಿಂದು ಆಗಿದ್ದ ಸಂತ್ರಸ್ತೆ ರೇಖಾ ಪತ್ರಾ ಅವರಿಗೆ ಭಾರತೀಯ ಜನತಾ ಪಾರ್ಟಿ ಟಿಕೆಟ್ ನೀಡಿದೆ. ಪಶ್ಚಿಮ ಬಂಗಾಲದ ಬಸೀರಹಟ್ ಲೋಕಸಭಾ ಕ್ಷೇತ್ರದಿಂದ ರೇಖಾ ಪತ್ರ ಸ್ಪರ್ಧಿಸಲಿದ್ದಾರೆ. ಇದು ಬಿಜೆಪಿಯ ಪಾಲಿಗೆ ಸವಾಲಿನದ್ದಾಗಿದ್ದು, ಒಂದು ವೇಳೆ ರೇಖಾ ಪತ್ರ ಗೆದ್ದರೆ ಅದು ಮಹಿಳಾ ಮುಖ್ಯಮಂತ್ರಿಯನ್ನೇ ಹೊಂದಿರುವ ಪಶ್ಚಿಮ ಬಂಗಾಲದ ಟಿಎಂಸಿ ಪಕ್ಷದ ಇಮೇಜಿಗೆ ದೊಡ್ಡ ದಕ್ಕೆ ತರಲಿದೆ ಎಂದು ಹೇಳಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರು ಅಭ್ಯರ್ಥಿ ರೇಖಾ ಪತ್ರಾ ಅವರಿಗೆ ಕರೆ ಮಾಡಿ ಚುನಾವಣೆಯ ಸಿದ್ಧತೆಯ ಬಗ್ಗೆ ಕೇಳಿದರು. ಈ ಸಂದರ್ಭದಲ್ಲಿ ರೇಖಾ ಅವರನ್ನು ಶಕ್ತಿ ಸ್ವರೂಪ್ ಎಂದು ಬಣ್ಣಿಸಿದ ಮೋದಿಯವರು, ರೇಖಾ ಪತ್ರಾ ಅವರ ಧೈರ್ಯವನ್ನು ಶ್ಲಾಘಿಸಿದರು. ಪ್ರಧಾನಿಯೊಂದಿಗೆ ಮಾತನಾಡಿದ ರೇಖಾ ಅವರು ತನಗೆ ಟಿಕೆಟ್ ನೀಡಿ ಪ್ರೋತ್ಸಾಹಿಸಿರುವುದಕ್ಕೆ ಕೃತಜ್ಞತೆಗಳನ್ನು ಹೇಳಿ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಎಲ್ಲರೂ ಬೆಂಬಲಿಸುತ್ತಿದ್ದಾರೆ. ಉತ್ತಮ ವಾತಾವರಣ ಸೃಷ್ಟಿಯಾಗಿದೆ ಎಂದು ತಿಳಿಸಿದರು. ನಿಮ್ಮ ಕೈ ನನ್ನ ತಲೆಯ ಮೇಲೆ ಇರುವುದರಿಂದ ಗೆಲ್ಲುವ ಭರವಸೆ ಮೂಡಿದೆ ಎಂದು ಮೋದಿಯವರಿಗೆ ರೇಖಾ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಮೋದಿಯವರು ಇಡೀ ರಾಷ್ಟ್ರದ ತಾಯಂದಿರ ಕೈ ತನ್ನ ತಲೆ ಮೇಲಿದೆ. ಅವರ ಆರ್ಶೀವಾದದಿಂದ ತಾನು ಉತ್ತಮ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಈ ಬಸೀರಹಟ್ ಲೋಕಸಭಾ ಕ್ಷೇತ್ರ ಟಿಎಂಸಿ ಪಕ್ಷಕ್ಕೂ ದೊಡ್ಡ ಸವಾಲಿನದ್ದಾಗಿದ್ದು, ಹಾಲಿ ಸಂಸದೆ, ನಟಿ ನುಸ್ರತ್ ಜಹಾನ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಅವರ ಸ್ಥಾನಕ್ಕೆ ಹಾಜಿ ನುರುಲ್ ಇಸ್ಲಾಂ ಅವರಿಗೆ ಟಿಕೆಟ್ ನೀಡಲಾಗಿದೆ.
Leave A Reply