ಕಾಂಗ್ರೆಸ್ಸಿಗೆ ಸೇರ್ತಾರಾ ತೇಜಸ್ವಿನಿ ಗೌಡ!
ಭಾರತೀಯ ಜನತಾ ಪಾರ್ಟಿಯಿಂದ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದ ತೇಜಸ್ವಿನಿ ಗೌಡ ಅವರು ಆಸೆ ಈಡೇರದ ಹಿನ್ನಲೆಯಲ್ಲಿ ತಮ್ಮ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ವಿಧಾನ ಪರಿಷತ್ ಸದಸ್ಯತ್ವದ ಅವಧಿ ಇದೇ ವರ್ಷದ ಜೂನ್ 17 ರವರೆಗೂ ಇತ್ತು. ಮತ್ತೊಂದು ಅವಧಿಗೆ ಅವಕಾಶ ಸಿಗುವ ಸಾಧ್ಯತೆ ಬಗ್ಗೆ ತೇಜಸ್ವಿನಿ ಗೌಡ ಅವರಿಗೆ ಅನುಮಾನ ಇದ್ದಿರಬಹುದು. ಅದಕ್ಕಾಗಿ ಅವರು ಲೋಕಸಭಾ ಕ್ಷೇತ್ರದ ಟಿಕೆಟನ್ನು ಪಡೆದು ಸ್ಪರ್ಧಿಸಲು ಮನಸ್ಸು ಮಾಡಿದ್ದರು.
ಒಕ್ಕಲಿಗರಾಗಿರುವುದರಿಂದ ತಮಗೆ ಸೇಫಾಗಿ ಕಾಣುವ ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರು – ಕೊಡಗು ಲೋಕಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದರು. ಆದರೆ ಮೈಸೂರಿನಿಂದ ಯದುವೀರ್ ಅವರಿಗೆ, ಬೆಂಗಳೂರು ಉತ್ತರದಿಂದ ಸದಾನಂದ ಗೌಡರ ಬದಲಿಗೆ ಶೋಭಾ ಕರಂದ್ಲಾಜೆ ಹಾಗೂ ಗ್ರಾಮಾಂತರದಲ್ಲಿ ಡಾ.ಮಂಜುನಾಥ್ ಅವರಿಗೆ ಟಿಕೆಟ್ ನೀಡಿರುವುದರಿಂದ ತೇಜಸ್ವಿನಿ ಗೌಡ ಅವರಿಗೆ ಯಾವ ಕ್ಷೇತ್ರವೂ ಉಳಿದಿಲ್ಲ.
2004 ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಖಾಸಗಿ ವಾಹಿನಿಯಲ್ಲಿ ನಿರೂಪಕರಾಗಿದ್ದ ತೇಜಸ್ವಿನಿ ಗೌಡ ಅವರನ್ನು ದೇವೆಗೌಡರ ವಿರುದ್ಧ ಕಣಕ್ಕೆ ಇಳಿಸಿತ್ತು. ಆಗ ರಾಜಕೀಯದಲ್ಲಿ ಏನೂ ಆಗಿರದಿದ್ದ ತೇಜಸ್ವಿನಿ ಗೌಡ ಅವರು ದೇವೇಗೌಡ ಅವರನ್ನು ಒಂದು ಲಕ್ಷ ಮತಗಳ ಅಂತರದಿಂದ ಸೋಲಿಸಿ ಇತಿಹಾಸವನ್ನು ನಿರ್ಮಿಸಿದ್ದರು. ಆ ಮೂಲಕ ರಾಷ್ಟ್ರದಾದ್ಯಂತ ಹೊಸ ಸಂಚಲನ ಸೃಷ್ಟಿಯಾಗಿತ್ತು. ಮಾಜಿ ಪ್ರಧಾನಿಯನ್ನು ಸೋಲಿಸಿದವರು ಎನ್ನುವ ಹೆಗ್ಗಳಿಕೆಯೊಂದಿಗೆ ರಾಜಕೀಯ ಪಡಸಾಲೆಗೆ ಕಾಲಿಟ್ಟ ತೇಜಸ್ವಿನಿ ಗೌಡ ಅವರು 2009 ರಲ್ಲಿ ಡಿಲಿಮಿಟೇಶನ್ ಆದ ಅದೇ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಆ ಬಳಿಕ ಕಾಂಗ್ರೆಸ್ಸಿನಲ್ಲಿ ಮೂಲೆಗುಂಪಾದ ತೇಜಸ್ವಿನಿ ಅವರು ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಿದ್ದಂತೆ ಬಿಜೆಪಿಗೆ ಸೇರಿದರು. ಕಳೆದ ಆರು ವರ್ಷಗಳಿಂದ ಅವರು ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.
ಅವರು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರಿಗೆ ಸ್ವಹಸ್ತಾಕ್ಷರದಿಂದ ಬರೆದ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ಅದನ್ನು ಸಭಾಪತಿಗಳು ಅಂಗೀಕರಿಸಿದ್ದಾರೆ. ತೇಜಸ್ವಿನಿ ಅವರು ಮತ್ತೆ ಮಾತೃಪಕ್ಷಕ್ಕೆ ಮರಳುತ್ತಾರಾ ಅಥವಾ ತಟಸ್ಥರಾಗಿ ಉಳಿಯುತ್ತಾರಾ ಎನ್ನುವುದು ಸದ್ಯಕ್ಕೆ ಕುತೂಹಲ.
Leave A Reply