ಈಶ್ವರಪ್ಪ ಸ್ಪರ್ಧೆ ಶಿವಮೊಗ್ಗ ಫಲಿತಾಂಶ ಬದಲಾಯಿಸುತ್ತಾ?
ತಮ್ಮ ಮಗನಿಗೆ ಭಾರತೀಯ ಜನತಾ ಪಾರ್ಟಿಯಿಂದ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗಲಿಲ್ಲ ಎಂದು ಪಕ್ಷದ ಮುಖಂಡರ ವಿರುದ್ಧ ಆಕ್ರೋಶಗೊಂಡಿರುವ ಕೆ.ಎಸ್.ಈಶ್ವರಪ್ಪನವರು ಏಪ್ರಿಲ್ 12 ಕ್ಕೆ ನಾಮಪತ್ರ ಸಲ್ಲಿಸುವುದು ಗ್ಯಾರಂಟಿ ಎಂದು ಹೇಳಿದ್ದಾರೆ. ಇದರಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುತ್ತಾ ಎನ್ನುವ ಕುತೂಹಲ ಮೂಡಿದೆ. ಮಾಜಿ ಮುಖ್ಯಮಂತ್ರಿಗಳಾಗಿರುವ ಎಸ್ ಬಂಗಾರಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪನವರ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಶಿವಮೊಗ್ಗದಲ್ಲಿ ನಾಲ್ಕು ಸಲ ಬಂಗಾರಪ್ಪನವರು ಗೆದ್ದಿದ್ದರೆ ಯಡಿಯೂರಪ್ಪ ಹಾಗೂ ಅವರ ಮಗ ರಾಘವೇಂದ್ರ ಒಟ್ಟು ನಾಲ್ಕು ಸಲ ಜಯ ಸಾಧಿಸಿದ್ದಾರೆ. ಆದರೆ ಇಲ್ಲಿಯ ತನಕ ಪಕ್ಷೇತರರಾಗಿ ಯಾರೂ ಕೂಡ ಇಲ್ಲಿ ಗೆದ್ದಿಲ್ಲ.
ಇನ್ನೊಬ್ಬರು ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರು ಸಂಯುಕ್ತ ಸೋಶಿಯಲಿಸ್ಟ್ ಪಾರ್ಟಿಯಿಂದ ಗೆದ್ದಿದ್ದರೆ, ಬಂಗಾರಪ್ಪನವರು ಒಂದು ಬಾರಿ ಕರ್ನಾಟಕ ವಿಕಾಸ ಪಾರ್ಟಿ ಹಾಗೂ ಇನ್ನೊಮ್ಮೆ ಸಮಾಜವಾದಿ ಪಾರ್ಟಿಯಿಂದ ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ವಿಜಯಮಾಲೆ ಧರಿಸಿದ್ದರು. ಆದರೆ ಬಂಗಾರಪ್ಪನವರಿಗಿದ್ದ ಇಮೇಜು ಈಶ್ವರಪ್ಪನವರಿಗೆ ಇಲ್ಲ ಎನ್ನುವುದು ಸ್ಪಷ್ಟ. ಇನ್ನು ಈಶ್ವರಪ್ಪನವರು ಸೋಲಿಸಬೇಕಾಗಿರುವುದು ಸಾಕ್ಷಾತ್ ಯಡ್ಯೂರಪ್ಪನವರ ಮಗನನ್ನು.
ತಮ್ಮ ಅಷ್ಟೂ ರಾಜಕೀಯ ಅನುಭವವನ್ನು ಧಾರೆಗೆರೆದು ಈ ಬಾರಿ ಯಡ್ಯೂರಪ್ಪನವರು ತಮ್ಮ ಮಗನ ಗೆಲುವನ್ನು ಖಾತ್ರಿಗೊಳಿಸಲಿದ್ದಾರೆ. ಈ ನಡುವೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರಿಗೂ ಇದು ಅಗ್ನಿಪರೀಕ್ಷೆಯಾಗಿದ್ದು, ತಮ್ಮ ಸಚಿವ ಸ್ಥಾನ ಉಳಿಯಬೇಕಾದರೆ ಸಹೋದರಿಯನ್ನು ಗೆಲ್ಲಿಸಲೇಬೇಕಾದ ಅನಿವಾರ್ಯತೆ ಇದೆ. ಸದ್ಯ ಈಶ್ವರಪ್ಪನವರಿಗೆ ಹೋಗುವ ಮತಗಳಲ್ಲಿ ಸಿಂಹಪಾಲು ನಿಸ್ಸಂಶಯವಾಗಿ ಬಿಜೆಪಿಯದ್ದೇ ಆಗಲಿದೆ. ಇನ್ನು ಮಧು ಬಂಗಾರಪ್ಪನವರ ವಿರೋಧಿಗಳಾಗಿದ್ದು, ಅವರಿಗೆ ಸೋಲಿನ ರುಚಿ ಕಾಣಿಸಬೇಕೆಂದು ಪಕ್ಷದೊಳಗೆ ಬಯಸುತ್ತಿರುವವರು ಈಶ್ವರಪ್ಪನವರಿಗೆ ಮತ ಚಲಾಯಿಸುವ ಸಾಧ್ಯತೆ ಇದೆ. ತಾವು ಗೆಲ್ಲದಿದ್ದರೂ ಈಶ್ವರಪ್ಪ ಬಿಜೆಪಿಯನ್ನು ಸೋಲಿಸುವಲ್ಲಿ ಯಶಸ್ವಿಯಾಗುತ್ತಾರಾ, ಪ್ರಶ್ನೆಗೆ ಉತ್ತರ ಸದ್ಯಕ್ಕೆ ಇಲ್ಲ!!
Leave A Reply