ಠಾಕ್ರೆ ನಿವಾಸದ ಮುಂದೆ ಹನುಮಾನ್ ಚಾಲೀಸಾ ಪಠಿಸಿದ ನವನೀತ್ ಕೌರ್ ಬಿಜೆಪಿಗೆ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ದರ್ಶನ” ಸಿನೆಮಾದಿಂದ 2004 ರಲ್ಲಿ ನಾಯಕಿನಟಿಯಾಗಿ ಸಿನೆಮಾ ವೃತ್ತಿ ಆರಂಭಿಸಿ ನಂತರ ತೆಲುಗು ಸಿನೆಮಾ ರಂಗದಲ್ಲಿ ಕೆಲವು ಹಿಟ್ ಸಿನೆಮಾಗಳನ್ನು ನೀಡಿದ ನವನೀತ್ ಕೌರ್ ಅವರು ಭಾರತೀಯ ಜನತಾ ಪಾರ್ಟಿಯಿಂದ ಅಮರಾವತಿ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಅವರು ಮಾರ್ಚ್ 28 ರಂದು ಅಧಿಕೃತವಾಗಿ ಬಿಜೆಪಿಯನ್ನು ಸೇರಿದರು. ಇವರು ಅಮರಾವತಿ ಕ್ಷೇತ್ರದ ಹಾಲಿ ಸಂಸದೆಯಾಗಿದ್ದು, 2019 ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದರು. ಆಗ ಅವರಿಗೆ ಎನ್ ಸಿಪಿ ಹಾಗೂ ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದವು. ಅವರು ಕಳೆದ ಬಾರಿ ಶಿವಸೇನೆಯ ಆನಂದರಾವ್ ಅವರನ್ನು ಸೋಲಿಸಿ ಸಂಸತ್ ಪ್ರವೇಶಿಸಿದ್ದರು.
ಮಹಾರಾಷ್ಟ್ರ ನಿಕಟಪೂರ್ವ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಮನೆ ಮಾತ್ರೋಶ್ರೀ ಹೊರಗೆ ಹನುಮಾನ್ ಚಾಲೀಸಾ ಪಠಣ ಮಾಡುವ ವಿಷಯದಲ್ಲಿ ಉಂಟಾದ ವಿವಾದದಿಂದ ನವನೀತ್ ಕೌರ್ ರಾಜಕೀಯವಾಗಿ ಹೆಚ್ಚು ಸುದ್ದಿಯಲ್ಲಿದ್ದರು. ಅವರ ಪತಿ ಕೂಡ ಶಾಸಕರಾಗಿದ್ದು, ಪಕ್ಷೇತರರಾಗಿ ಅಮರಾವತಿ ನಗರದಿಂದ ಗೆದ್ದಿದ್ದಾರೆ. ಇಬ್ಬರ ವಿರುದ್ಧವೂ ಮಹಾರಾಷ್ಟ್ರ ಪೊಲೀಸ್ ಇಲಾಖೆ ಹನುಮಾನ ಚಾಲೀಸಾ ವಿವಾದದಲ್ಲಿ ಕೇಸು ದಾಖಲಿಸಿದ ಪರಿಣಾಮ ಕೌರ್ 14 ದಿನಗಳ ಕಾಲ ಮುಂಬೈಯ ಬೈಕುಲಾ ಜೈಲಿನಲ್ಲಿದ್ದರು. ಅವರು ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದರು ಎನ್ನುವ ಆರೋಪ ಮುಂಬೈ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದು ಮಾನ್ಯ ನ್ಯಾಯಾಲಯ ನವನೀತ್ ಕೌರ್ ಗೆ ಎರಡು ಲಕ್ಷ ರೂಪಾಯಿ ದಂಡ ಕೂಡ ವಿಧಿಸಿತ್ತು. ನವನೀತ್ ಕೌರ್ ಗೆಲ್ಲುವ ಸಾಧ್ಯತೆ ಹೆಚ್ಚಿದ್ದು, ಬಿಜೆಪಿಯ ಸಂಖ್ಯಾದೃಷ್ಟಿಯಿಂದ ಇದು ಮಹತ್ವದ ಬೆಳವಣಿಗೆಯಾಗಿದೆ.
Leave A Reply