ನಳಿನ್ ಕುಮಾರ್ ಕಟೀಲ್ ಅವರಿಗೆ ಮಹತ್ವದ ಜವಾಬ್ದಾರಿ ನೀಡಿದ ಹೈಕಮಾಂಡ್!
ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಮುಖಂಡರು ಮಹತ್ವದ ಜವಾಬ್ದಾರಿಯನ್ನು ವಹಿಸಿದ್ದಾರೆ. ಕಟೀಲ್ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಕೇರಳ ರಾಜ್ಯದ ಸಹಪ್ರಭಾರಿಯಾಗಿದ್ದಾರೆ.
ಈ ಬಾರಿ ಬಿಜೆಪಿಯಿಂದ ಕೇರಳದಲ್ಲಿ ಘಟಾನುಘಟಿ ನಾಯಕರು ಕಣಕ್ಕೆ ಇಳಿದಿದ್ದಾರೆ. ತ್ರಿಶೂರ್ ನಿಂದ ಖ್ಯಾತ ನಟ ಸುರೇಶ್ ಗೋಪಿ, ತಿರುವನಂತಪುರದಿಂದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಅಟ್ಟಿಂಗಲ್ ನಿಂದ ವಿ. ಮುರಳೀಧರನ್ ಸ್ಪರ್ಧೆಯಲ್ಲಿದ್ದಾರೆ. 2019 ರಲ್ಲಿ ಬಿಜೆಪಿಯಿಂದ ಯಾರೂ ಗೆದ್ದಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರದ ಬಿಜೆಪಿ ಮುಖಂಡರು ಈ ಬಾರಿ ಕನಿಷ್ಟ ಮೂರರಿಂದ ನಾಲ್ಕು ಸ್ಥಾನಗಳನ್ನು ಜಯಿಸಲೇಬೇಕೆಂಬ ಪಣ ತೊಟ್ಟಿದ್ದಾರೆ. ಈ ಮೂಲಕ ಕೇರಳದಲ್ಲಿ ಬಿಜೆಪಿಯ ಬಾವುಟ ಹಾರಿಸುವುದಕ್ಕೆ ಪಕ್ಷ ಸಜ್ಜಾಗಿದೆ. ಈ ಉಮ್ಮೇದಿನಲ್ಲಿ ಪಕ್ಷದ ಮುಖಂಡರು ರಣತಂತ್ರ ಹೆಣೆಯುತ್ತಿದ್ದಾರೆ.
ಕರ್ನಾಟಕದಲ್ಲಿ ನಾಲ್ಕೂವರೆ ವರ್ಷ ಪಕ್ಷದ ಅಧ್ಯಕ್ಷರಾಗಿದ್ದು, ಮೂರು ಬಾರಿ ಲೋಕಸಭಾ ಸದಸ್ಯರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರು ತಳಮಟ್ಟದಿಂದ ಪಕ್ಷದ ಸಂಘಟನೆಯನ್ನು ಮಾಡುವಲ್ಲಿ ನಿಸ್ಸೀಮರಾಗಿದ್ದಾರೆ. ಅವರ ಅನುಭವವನ್ನು ಕೇರಳ ಬಿಜೆಪಿ ಮುಖಂಡರು ಪಡೆಯಬೇಕೆಂಬ ಕಾರಣಕ್ಕೆ ಕೇಂದ್ರದ ನಾಯಕರು ಈ ಮಹತ್ವದ ಜವಾಬ್ದಾರಿಯನ್ನು ನಳಿನ್ ಅವರಿಗೆ ವಹಿಸಿದ್ದಾರೆ.
Leave A Reply