ನಟ ವಿಜಯ ರಾಘವೇಂದ್ರ ಪತ್ನಿಯ ಕುಟುಂಬದಲ್ಲಿ ಮತ್ತೆ ನೋವು!
ಈಗಾಗಲೇ ಬರಸಿಡಿಲಿನಂತೆ ಎರಗಿದ ಆಘಾತದಿಂದ ನಟ ವಿಜಯ ರಾಘವೇಂದ್ರ ಹಾಗೂ ಸಂಬಂಧಿಕರು ಚೇತರಿಸಿಕೊಳ್ಳಲು ಸಾಧ್ಯವಾಗದೇ ನರಳುತ್ತಿರುವಾಗ ಮತ್ತೊಂದು ಅವಘಡ ಅವರನ್ನು ಅಪ್ಪಿಕೊಂಡಿದೆ. ವಿಜಯ ರಾಘವೇಂದ್ರ ಅವರ ಪತ್ನಿ ದಿವಂಗತ ಸ್ಪಂದನಾ ಅವರ ಸೋದರ ಮಾವ ಹೇರಾಜೆ ಶೇಖರ ಬಂಗೇರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಸ್ಪಂದನಾ ಹಾಗೂ ಬೆಳ್ತಂಗಡಿ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಅವರ ತಾಯಿಯ ಅಣ್ಣ ಶೇಖರ ಬಂಗೇರ ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿ ನಡೆದ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರು ಕೈಯಲ್ಲಿ ಆಹಾರ ಪೊಟ್ಟಣ ಹಿಡಿದು ರಸ್ತೆ ದಾಟುವಾಗ ದುರಂತ ಜರುಗಿದೆ.
ಶೇಖರ ಬಂಗೇರ ಅವರು ರಸ್ತೆ ದಾಟುವಾಗ ಯುವತಿಯೊಬ್ಬಳು ದ್ವಿಚಕ್ರ ವಾಹನ ಚಲಾಯಿಸಿ ಬಂದು ಡಿಕ್ಕಿ ಹೊಡೆದಿದ್ದಾಳೆ. ಇದರಿಂದ ಬಂಗೇರ ಅವರು ರಸ್ತೆಯಲ್ಲಿ ಬಿದ್ದ ರಭಸಕ್ಕೆ ಅವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿಯಲ್ಲಿ ಅವರು ಮರಣ ಹೊಂದಿದ್ದಾರೆ. ವಾಹನ ಸವಾರಿ ನಡೆಸುತ್ತಿದ್ದ ಯುವತಿ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ.
Leave A Reply