ಅನ್ಸಾರಿ ಹೆಣ ನೋಡಲು ಪತ್ನಿ ಬಂದರೆ ಅರೆಸ್ಟ್!?

ಗ್ಯಾಂಗ್ ಸ್ಟರ್, ಮಾಫಿಯಾ ಡಾನ್, ಐದು ಬಾರಿಯ ಶಾಸಕ, ಬಿಜೆಪಿ ಶಾಸಕನ ಹತ್ಯೆಯ ಕೇಸಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮುಖ್ತಾರ್ ಅನ್ಸಾರಿ ಜೈಲಿನಲ್ಲಿ ಹೃದಯಾಘಾತದಿಂದ ಮೃತನಾಗಿದ್ದು, ಅವನ ಹೆಣ ನೋಡಲು ಪತ್ನಿಯೇ ಬರದ ಸ್ಥಿತಿ ನಿರ್ಮಾಣವಾಗಿದೆ. ಆಕೆ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದು, ಪೊಲೀಸರ ಬಂಧನದ ಭಯದಿಂದ ಆಗಾಗ್ಗೆ ಅಡಗುತಾಣಗಳನ್ನು ಬದಲಾಯಿಸುತ್ತಿದ್ದಾಳೆ. ಆಕೆಯ ವಿರುದ್ಧ ಪ್ರಸ್ತುತ 11 ಪ್ರಕರಣಗಳು ಇದ್ದು, ಉತ್ತರಪ್ರದೇಶದ ಲೇಡಿ ಡಾನ್ ಗಳ ಪಟ್ಟಿಯಲ್ಲಿ ಅವಳ ಹೆಸರು ಅಗ್ರಸ್ಥಾನದಲ್ಲಿದೆ.
ಒಂದು ವೇಳೆ ಮುಖ್ತಾರ್ ಅನ್ಸಾರಿ ಪತ್ನಿ ಅಫ್ಸಾ ಅನ್ಸಾರಿ ಅಂತಿಮ ದರ್ಶನಕ್ಕೆ ಆಗಮಿಸಿದ್ದಲ್ಲಿ ಅವಳನ್ನು ಬಂಧಿಸಲು ಯುಪಿ ಪೊಲೀಸರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇನ್ನು ಅಫ್ಸಾ ವೇಷಮರೆಸಿಕೊಂಡು ಬರುವ ಸಾಧ್ಯತೆ ಇರುವುದರಿಂದ ಅದಕ್ಕಾಗಿ ಸಾಮಾನ್ಯ ದಿರಿಸಿನಲ್ಲಿಯೂ ಪೊಲೀಸರನ್ನು ಸಜ್ಜುಗೊಳಿಸಲಾಗಿದೆ. 2005 ರಲ್ಲಿ ಮುಖ್ತಾರ್ ಜೈಲಿನಲ್ಲಿ ಫಿಕ್ಸ್ ಆದ ನಂತರ ಪತ್ನಿ ಅಫ್ಸಾ ಆತನ ವಹಿವಾಟುಗಳ ಉಸ್ತುವಾರಿ ನೋಡಲು ಆರಂಭಿಸಿದ್ದಳು. ಆಕೆಯನ್ನು ಆತನ ರಿವಾಲ್ವರಿನ ಕೊಂಡಿ ಎಂದೇ ಕರೆಯಲಾಗುತ್ತದೆ. ಮಕ್ಕಳು ದೊಡ್ಡವರಾದ ಮೇಲೆ ಅವರು ವ್ಯವಹಾರಗಳನ್ನು ನೋಡಲು ಆರಂಭಿಸಿದ ಬಳಿಕ ಅಫ್ಸಾ ತೆರೆಗೆ ಸರಿದಳು. ಅವಳ ಮೇಲೆ ಯುಪಿ ಪೊಲೀಸರು 75000 ನಗದು ಘೋಷಿಸಿದ್ದು, ಆಕೆಯ ಸುಳಿವನ್ನು ನೀಡಿದವರಿಗೆ ಅದನ್ನು ಬಹುಮಾನವಾಗಿ ನೀಡಲಾಗುವುದು ಎಂದು ಪ್ರಚಾರ ಮಾಡಲಾಗಿದೆ.
ಮುಖ್ತಾರ್ ಇನ್ನೊಬ್ಬ ಪುತ್ರ ಅಬ್ಬಾಸ್ ಅನ್ಸಾರಿ ಕೂಡ ಅನೇಕ ಪ್ರಕರಣಗಳನ್ನು ಎದುರಿಸುತ್ತಿದ್ದು, ಸದ್ಯ ಜೈಲಿನಲ್ಲಿ ಬಂಧಿಯಾಗಿದ್ದಾನೆ. ಇನ್ನು ಮುಖ್ತಾರ್ ಸಹೋದರ ಅಫ್ಜಲ್ ಅನ್ಸಾರಿ ಗಾಜಿಪುರದ ಹಾಲಿ ಸಂಸದರಾಗಿದ್ದು, ಸಹೋದರರು ತಮ್ಮ ಮಾಫಿಯಾವನ್ನು ಬಳಸಿ ಅಧಿಕಾರಕ್ಕೆ ಬರುತ್ತಿದ್ದರು. ಇನ್ನು ಮುಖ್ತಾರ್ ಅನ್ಸಾರಿ ಸೊಸೆ ಕೂಡ ಜೈಲಿನಲ್ಲಿದ್ದಾಳೆ. ನಿಖತ್ ಬಾನೋ ತನ್ನ ಗಂಡ ಅಬ್ಬಾಸ್ ನನ್ನು ಜೈಲಿನಿಂದ ಪರಾರಿ ಮಾಡುವ ಷಡ್ಯಂತ್ರವನ್ನು ರಚಿಸಿ ಸಿಕ್ಕಿಬಿದ್ದಿದ್ದಾಳೆ. ಒಟ್ಟಿನಲ್ಲಿ ಈ ಕುಟುಂಬ ಜೈಲಿನಲ್ಲಿ ಮತ್ತು ಪೊಲೀಸರ ನಿಗಾದಲ್ಲಿ ಇದ್ದು, ಮುಖ್ತಾರ್ ಅನ್ಸಾರಿಯ ಸಾವಿನೊಂದಿಗೆ ಈ ಕುಟುಂಬದ ಮಾಫಿಯಾ ಮೇಲಿನ ಹಿಡಿತ ಕೊನೆಗೊಳ್ಳುವ ಲಕ್ಷಣ ಕಂಡುಬಂದಿದೆ.