ಮದುವೆಯಾಗಿ ಸಾಂಸಾರಿಕ ಜೀವನದಲ್ಲಿ ಆಸಕ್ತಿ ಇಲ್ಲ, ಜನಸೇವೆ ಮಾಡಬೇಕು – ನಿಶಾ ಯೋಗೇಶ್ವರ್
ನಿಶಾ ಯೋಗೇಶ್ವರ್ ಅವರಿಗೆ ಮದುವೆಯಾಗಿಲ್ಲ. ಅವರಿಗೆ ಅವರ ತಂದೆಯೇ ಧಾರೆ ಎರೆಯಬೇಕು. ರಾಜಕಾರಣಕ್ಕಾಗಿ ತಂದೆ ಮತ್ತು ಮಗಳನ್ನು ಬೇರೆ ಮಾಡುವ ಕೆಲಸಕ್ಕೆ ನಾವು ಕೈ ಹಾಕುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಹೇಳಿಕೆಗೆ ನಿಶಾ ಯೋಗೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ದೇಶದಲ್ಲಿ ಅನೇಕ ಮಹಿಳೆಯರು ಮದುವೆಯಾಗದೆಯೂ ದೇಶಸೇವೆ ಮಾಡಿದ್ದಾರೆ. ನಾನು ಕೂಡ ಅದೇ ದಾರಿಯಲ್ಲಿ ಸಾಗಲು ಬಯಸುತ್ತೇನೆ. ನನಗೆ ಮದುವೆ, ಸಾಂಸಾರಿಕ ಜೀವನದಲ್ಲಿ ಆಸಕ್ತಿ ಇಲ್ಲ. ಹೀಗೆನೆ ಇದ್ದು, ಜನರ ಸೇವೆ ಮಾಡಬೇಕೆಂಬ ಬಯಕೆ ಇದೆ ಎಂದು ತಿಳಿಸಿದ್ದಾರೆ.
ನಿಶಾ ಅವರ ತಂದೆ ಯೋಗೇಶ್ವರ್ ಅವರು ಸದ್ಯ ಭಾರತೀಯ ಜನತಾ ಪಾರ್ಟಿಯ ವಿಧಾನಪರಿಷತ್ ಸದಸ್ಯರಾಗಿದ್ದು, ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ್ ಅವರ ಗೆಲುವಿಗೆ ಅವಿರತ ಪ್ರಯತ್ನ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಕುಮಾರಸ್ವಾಮಿ ಗೆದ್ದು ಕೇಂದ್ರಕ್ಕೆ ಹೋದರೆ ಅವರು ಹಾಲಿ ಪ್ರತಿನಿಧಿಸುತ್ತಿರುವ ಚೆನ್ನಪಟ್ಟಣಕ್ಕೆ ಉಪಚುನಾವಣೆ ನಡೆಯಬೇಕಾಗಿದೆ. ಅಂತಹ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ಯೋಗೇಶ್ವರ್ ಅವರಿಗೆ ಟಿಕೆಟ್ ಕೊಟ್ಟರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಯೋಗೇಶ್ವರ್ ಸುಲಭವಾಗಿ ಗೆಲ್ಲುವ ಸಾಧ್ಯತೆ ಇದೆ.
ಹೀಗಿರುವಾಗ ತಂದೆಯ ವಿರುದ್ಧ ಮಗಳನ್ನು ಕಾಂಗ್ರೆಸ್ ಕಣಕ್ಕೆ ಇಳಿಸುತ್ತಾ ಎನ್ನುವುದು ಸದ್ಯದ ಲೆಕ್ಕಾಚಾರ. ಆದರೆ ಅದು ತುಂಬಾ ದೂರದ ವಿಷಯ ಎನ್ನುವುದು ನಿಶಾ ಅವರಿಗೂ ಗೊತ್ತಿದೆ. ಅವರು ಸದ್ಯ ಯಾವುದೇ ಪಕ್ಷದ ಪರ ಕೆಲಸ ಮಾಡುತ್ತಿಲ್ಲ ಮತ್ತು ಪ್ರಚಾರ ಕೂಡ ಮಾಡುತ್ತಿಲ್ಲ. ಆದರೆ ಅವರನ್ನು ಕಾಂಗ್ರೆಸ್ಸಿಗೆ ಸೇರಿಸಲು ಕಾಂಗ್ರೆಸ್ ಮುಖಂಡರು ಲೋಕಸಭಾ ಚುನಾವಣೆ ತನಕ ಕಾಯುವ ನಿರ್ಧಾರ ಮಾಡಿದಂತಿದೆ.
Leave A Reply