ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕಿಳಿದ ಸುಮಲತಾ ಆಪ್ತ!
ಎಪ್ರಿಲ್ 3 ರಂದು ಮಂಡ್ಯದಲ್ಲಿ ಅಭಿಮಾನಿಗಳ, ಬೆಂಬಲಿಗರ ಸಭೆ ನಡೆಸಿ ಮುಂದಿನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಹೇಳಿದ್ದ ಸಂಸದೆ ಸುಮಲತಾ ಅವರು ಕಳೆದ ಬಾರಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ಇಂಡವಾಳು ಸಚ್ಚಿದಾನಂದ ಮೈತ್ರಿ ಅಭ್ಯರ್ಥಿ ಪರ ಈಗಾಗಲೇ ಪ್ರಚಾರಕ್ಕೆ ಇಳಿದಿದ್ದಾರೆ. ಈ ಬಾರಿಯೂ ಸುಮಲತಾ ಪಕ್ಷೇತರವಾಗಿ ಚುನಾವಣೆಗೆ ನಿಂತರೆ ಸಚ್ಚಿದಾನಂದ ಅವರು ಸುಮಲತಾ ಬೆನ್ನಿಗೆ ನಿಲ್ಲುವ ಸಾಧ್ಯತೆ ಬಹುತೇಕ ಇಲ್ಲವಾಗಿದೆ.
ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಯುವ ಮೋರ್ಚಾ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಚ್ಚಿದಾನಂದ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ವಿರುದ್ಧ ಸಚ್ಚಿದಾನಂದ ಅವರು ಮಾತನಾಡುವುದರಿಂದ ಸುಮಲತಾ ಅವರಿಗೆ ಏನೂ ಬೇಸರ ಇಲ್ಲ. ಆದರೆ ಮಾತನಾಡಿದ ವೇದಿಕೆ ಮಾತ್ರ ಜೆಡಿಎಸ್ ಹಾಗೂ ಭಾರತೀಯ ಜನತಾ ಪಾರ್ಟಿ ಮೈತ್ರಿ ಕೂಟದಿಂದ ಮಾಡಿದ ಸಭೆ ಅದಾಗಿತ್ತು. ಒಂದು ವೇಳೆ ಸುಮಲತಾ ಅವರು ಸ್ಪರ್ಧಿಸದೇ ಕುಮಾರಸ್ವಾಮಿಯವರಿಗೆ ಬೆಂಬಲ ನೀಡಿದರೆ ಆಗ ಸಚ್ಚಿದಾನಂದ ಅವರು ಮೈತ್ರಿಕೂಟದ ಅಭ್ಯರ್ಥಿಯ ಪರವಾಗಿ ಪ್ರಚಾರ ಮುಂದುವರೆಸಿದರೆ ಯಾವುದೇ ಗೊಂದಲ ಆಗುವುದಿಲ್ಲ.
ಅದೇ ಸುಮಲತಾ ಸ್ವಾಭಿಮಾನದ ಪ್ರಶ್ನೆಯನ್ನು ಇಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಆಗ ಸಚ್ಚಿದಾನಂದ ಇವರ ವಿರುದ್ಧ ಪ್ರಚಾರ ಮಾಡಿದರೆ ಸುಮಲತಾ ಅವರ ಗೆಲುವು ಕಷ್ಟವಾಗಬಹುದು. ಇನ್ನು ಸುಮಲತಾ ತಾವು ಗೆದ್ದರೂ , ಸೋತರೂ ಮಂಡ್ಯದಲ್ಲಿಯೇ ಎಂದು ಹೇಳಿರುವುದರಿಂದ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಯೂ ಇದೆ. ಒಂದು ವೇಳೆ ಗೆದ್ರೆ ಸಂಸತ್ತಿಗೆ, ಸೋತರೆ ಜನ ಆರ್ಶೀವದಿಸಲಿಲ್ಲ, ಅದಕ್ಕೆ ಸೋತೆ ಎಂದು ರಾಜಕೀಯದಿಂದ ದೂರಸರಿಯಲೂಬಹುದು. ಒಟ್ಟಿನಲ್ಲಿ ಎರಡು ದಿನದಲ್ಲಿ ಮಂಡ್ಯ ರಾಜಕೀಯದ ಸ್ಪಷ್ಟ ಚಿತ್ರಣ ಸಿಗಲಿದೆ.
Leave A Reply