ಬಿಜೆಪಿ ವಿರುದ್ಧ ಸ್ಪರ್ಧಿಸುವುದು ಬಿಟ್ಟು ನಮ್ಮೆದುರು ಯಾಕೆ ಎಂದ ಪಿಣರಾಯಿ!
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಭಾರತೀಯ ಜನತಾ ಪಾರ್ಟಿ ಸ್ಟ್ರಾಂಗ್ ಇದ್ದ ಕಡೆ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವುದನ್ನು ಬಿಟ್ಟು ನಮ್ಮ ವಿರುದ್ಧ ಸ್ಪರ್ಧಿಸುವುದು ಯಾಕೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶ್ನಿಸಿದ್ದಾರೆ. ಕೇರಳದ ಆಡಳಿತಾರೂಢ ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್ (ಎಲ್ ಡಿಎಫ್) ನಲ್ಲಿರುವ ಸದಸ್ಯ ಪಕ್ಷಗಳು ಇ.ಂ.ಡಿ.ಯಾ ಮೈತ್ರಿಕೂಟದ ಅಂಗಪಕ್ಷಗಳು. ಮೈತ್ರಿಧರ್ಮದ ಪ್ರಕಾರ ರಾಹುಲ್ ಗಾಂಧಿ ಮಿತ್ರಪಕ್ಷಗಳ ವಿರುದ್ಧ ಸ್ಪರ್ಧಿಸಬಾರದು. ಅದರ ಬದಲು ಎಲ್ಲಿಯಾದರೂ ಪ್ರಬಲ ಬಿಜೆಪಿ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿ ಅವರನ್ನು ಮಣಿಸಬೇಕು. ಆಗ ಒಬ್ಬ ಬಿಜೆಪಿ ಮುಖಂಡನನ್ನು ಸೋಲಿಸಿದಂತೆ ಆಗುತ್ತದೆ. ಅದರೊಂದಿಗೆ ತನ್ನದೇ ಮೈತ್ರಿಕೂಟದ ಒಬ್ಬ ಅಭ್ಯರ್ಥಿಯನ್ನು ಸಂಸತ್ತಿನ ಒಳಗೆ ತಂದಂತೆ ಆಗುತ್ತದೆ. ಅದು ಬಿಟ್ಟು ಸಿಪಿಐ ರಾಷ್ಟ್ರೀಯ ನಾಯಕಿ ಆನ್ನಿ ರಾಜಾರ ವಿರುದ್ಧ ನಿಂತು ಗೆದ್ದರೆ ಅದರಿಂದ ಸಾಧಿಸಿದ್ದೇನು ಎಂದು ಪಿಣರಾಯಿ ವಿಜಯನ್ ಕೇಳಿದ್ದಾರೆ.
ಇನ್ನು ಚುನಾವಣೆಯ ಅನಿವಾರ್ಯತೆಯಿಂದ ಎರಡೂ ಪಕ್ಷಗಳು ಪರಸ್ಪರ ಟೀಕಾ ಪ್ರಹಾರವನ್ನು ಮಾಡಲೇಬೇಕಾಗುತ್ತದೆ. ಈಗಾಗಲೇ ಸಿಪಿಐ ವಯನಾಡಿನಲ್ಲಿ ತನ್ನ ವಿರೋಧಿ ಪಕ್ಷ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಆರಂಭಿಸಿದೆ. ಇನ್ನು ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಸೂಕ್ತವಾಗಿ ಹರಿಹಾಯುತ್ತಿಲ್ಲ ಎಂದು ಪಿಣರಾಯಿ ಆರೋಪಿಸಿದ ಘಟನೆಯೂ ನಡೆದಿದೆ.
ಕೋಳಿಕ್ಕೋಡ್ ನಲ್ಲಿ ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ” ಆನ್ನಿ ರಾಜಾ ಪ್ರಬಲ ಕಮ್ಯೂನಿಸ್ಟ್ ನಾಯಕಿ. ಮಣಿಪುರದ ವಿಷಯದಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಟೀಕಿಸಿದ್ದರು. ಬಿಜೆಪಿ ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಆನ್ನಿರಾಜಾ ಉಪಸ್ಥಿತರಿರುತ್ತಾರೆ. ಆದರೆ ಆನ್ನಿರಾಜಾ ಅವರಂತಹ ತೀಕ್ಣ ಪ್ರತಿಭಟನಾಕಾರಿಯನ್ನು ರಾಹುಲ್ ಅವರಲ್ಲಿ ಕಾಣಲು ಸಾಧ್ಯವಿಲ್ಲ” ಎಂದಿದ್ದಾರೆ.
ಕಳೆದ ಬಾರಿ ರಾಹುಲ್ ಅವರು ಎಲ್ ಡಿಎಫ್ ಅಭ್ಯರ್ಥಿ ಪಿಪಿ ಸುನೀರ್ ಅವರನ್ನು 4.31 ಲಕ್ಷಕ್ಕೂ ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿಯೂ ಸ್ಪರ್ಧೆ ಎಲ್ ಡಿಎಫ್ ವಿರುದ್ಧವೇ ಇದೆ. ಇದು ಪಿಣರಾಯಿ ವಿಜಯನ್ ಅವರಿಗೆ ಅಸಮಾಧಾನ ತಂದಿದೆ. ಕೇಂದ್ರದಲ್ಲಿ ಒಟ್ಟಿಗೆ ಕುಳಿತು ಸಭೆ ಮಾಡಿ ರಾಜ್ಯಕ್ಕೆ ಬಂದಾಗ ಕಾಂಗ್ರೆಸ್ ವಿರುದ್ಧವೇ ಸ್ಪರ್ಧಿಸಬೇಕಾದ ಪರಿಸ್ಥಿತಿ ವಿಪಕ್ಷ ಮೈತ್ರಿಕೂಟದ್ದು.
Leave A Reply