ಆ ನಿರ್ಧಾರ ತೆಗೆದುಕೊಂಡು ವಿವಾದಕ್ಕೆ ತೆರೆ ಎಳೆದ ಸುಮಲತಾ!
ಎಂಪಿ ಸೀಟು ಬಿಟ್ಟುಕೊಟ್ಟು ಬಿಜೆಪಿ ಪಕ್ಷಕ್ಕೆ ಸೇರುತ್ತಿದ್ದೇನೆ. 2019 ರಲ್ಲಿ ಇದ್ದ ಸವಾಲುಗಳಿಗಿಂತ ಈಗಿನ ಸವಾಲುಗಳು ಹೆಚ್ಚಿವೆ. 2019 ರಲ್ಲಿ ಮೋದಿಯವರು ನನಗಾಗಿ ಪ್ರಚಾರ ಮಾಡಿ ಅಂಬರೀಶ್ ಅವರ ಹೆಸರನ್ನು ಪ್ರಸ್ತಾಪ ಮಾಡಿ ಬೆಂಬಲಿಸಿದ್ದರು. ಈಗ ಮೈತ್ರಿಯಲ್ಲಿ ಜೆಡಿಎಸ್ ಗೆ ಮಂಡ್ಯ ಸೀಟು ಕೊಡಲಾಗಿದೆ. ಕೊನೆಯ ಕ್ಷಣದ ತನಕ ಮಂಡ್ಯವನ್ನು ಬಿಜೆಪಿ ಉಳಿಸಿಕೊಳ್ಳಲಿ ಎಂದು ಬಯಸಿದ್ದೆ. ನರೇಂದ್ರ ಮೋದಿಯವರು ಈ ದೇಶದ ಶಕ್ತಿ. ಅವರು ದೇಶಕ್ಕಾಗಿ ಬದುಕನ್ನು ಅರ್ಪಿಸಿಕೊಂಡಿದ್ದಾರೆ. ಅದಕ್ಕಾಗಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾಗುತ್ತೇನೆ ಎಂದು ಸುಮಲತಾ ಅವರು ಮಂಡ್ಯದಲ್ಲಿ ಬೆಂಬಲಿಗರ ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ. ಈ ಮೂಲಕ ಭಾರತೀಯ ಜನತಾ ಪಾರ್ಟಿ – ಜಾತ್ಯಾತೀತ ಜನತಾ ದಳ ಮೈತ್ರಿಗೆ ಬೆಂಬಲ ಕೊಡುತ್ತಿದ್ದೇನೆ ಎಂದು ಸಂಸದೆ ಸುಮಲತಾ ಬಹಿರಂಗವಾಗಿ ಘೋಷಿಸಿದ್ದಾರೆ.
ಕೆಲವು ದಿನಗಳಿಂದ ಸುಮಲತಾ ಮುಂದಿನ ನಡೆಯ ಬಗ್ಗೆ ಇದ್ದ ಕುತೂಹಲ ಈ ಮೂಲಕ ಕೊನೆಯಾಗಿದೆ. ಈಗಾಗಲೇ 2019 ರಲ್ಲಿ ಅವರೊಂದಿಗೆ ಇದ್ದ ಆಪ್ತರು ಬಿಜೆಪಿ ಸೇರಿದ್ದಾರೆ. ಸಿನೆಮಾ ನಟ ದರ್ಶನ್ ಅವರು ಸುಮಲತಾ ಅವರು ತಾಯಿ ಇದ್ದ ಹಾಗೆ. ಅಮ್ಮ ತೆಗೆದುಕೊಳ್ಳುವ ಯಾವ ನಿರ್ಧಾರಕ್ಕೂ ತಾನು ಬದ್ಧ ಎಂದು ಹೇಳುತ್ತಾ ಬರುತ್ತಿದ್ದರು. ಅದನ್ನು ಮತ್ತೆ ಸಭೆಯಲ್ಲಿ ಪುನರುಚ್ಚರಿಸಿದ್ದಾರೆ. ಇನ್ನು ಸುಮಲತಾ ಅವರು ತಮ್ಮ ರಾಜಕೀಯದ ಮುಂದಿನ ನಿರ್ಧಾರ ತಿಳಿಸುವ ಮುನ್ನ ತಾವು ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನು ವಿವರಿಸಿದರು. ಅದಕ್ಕಿಂತ ಮೊದಲು ಪರದೆಯಲ್ಲಿ 5 ವರ್ಷಗಳ ಸಾಧನೆಯ ಕಿರುಚಿತ್ರವನ್ನು ಪ್ರಸಾರ ಮಾಡಲಾಯಿತು.
ಈ ಬಾರಿ ಒಂದು ವೇಳೆ ಸುಮಲತಾ ಅವರು ಪಕ್ಷೇತರರಾಗಿ ಸ್ಪರ್ಧಿಸಿದರೆ ಅವರು ಗೆಲುವಿನ ಸಾಧ್ಯತೆ ಕಡಿಮೆ ಇತ್ತು. ಯಾಕೆಂದರೆ ಬಿಜೆಪಿ ಕಳೆದ ಬಾರಿಯಂತೆ ಈ ಬಾರಿ ಬೆಂಬಲ ಕೊಡುವ ಸಾಧ್ಯತೆನೆ ಇರಲಿಲ್ಲ. ಕಳೆದ ಬಾರಿ ಬಿಜೆಪಿ ಮಂಡ್ಯದಲ್ಲಿ ಅಭ್ಯರ್ಥಿ ಹಾಕಿರಲಿಲ್ಲ. ಮೋದಿಯವರು ಪೂರ್ಣ ಬೆಂಬಲ ನೀಡಿದ್ದರು. ಆದರೆ ಈ ಬಾರಿ ಅಲ್ಲಿ ಕುಮಾರಸ್ವಾಮಿಯವರು ಮೈತ್ರಿ ಅಭ್ಯರ್ಥಿ. ಅದರೊಂದಿಗೆ ಕಾಂಗ್ರೆಸ್ ಕೂಡ ಅಧಿಕಾರದಲ್ಲಿದ್ದು, ಪೂರ್ಣ ಪ್ರಮಾಣದ ಶಕ್ತಿಯೊಂದಿಗೆ ಕಣಕ್ಕೆ ಇಳಿದಿದೆ. ಒಂದು ಹೈವೋಲ್ಟೇಜ್ ಕದನ ಕಾಂಗ್ರೆಸ್ ಹಾಗೂ ಮೈತ್ರಿ ಅಭ್ಯರ್ಥಿ ಮಧ್ಯದಲ್ಲಿ ನಡೆಯಲಿದೆ. ಕಳೆದ ಬಾರಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕಣದಲ್ಲಿ ಇದ್ದರೂ ಕಾಂಗ್ರೆಸ್ ನ ಹಲವು ಮುಖಂಡರು ತೆರೆಮರೆಯಲ್ಲಿ ಸುಮಲತಾ ಅವರ ಗೆಲುವಿಗೆ ಶ್ರಮಿಸಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ. ನಿಖಿಲ್ ಬದಲು ಅವರ ತಂದೆ ಮಾಜಿ ಸಿಎಂ ಕುಮಾರಸ್ವಾಮಿ ಕಣದಲ್ಲಿದ್ದಾರೆ. ಎದುರಿಗೆ ಗಟ್ಟಿಕುಳ ಸ್ಟಾರ್ ಚಂದ್ರು ಸ್ಪರ್ಧೆಯಲ್ಲಿದ್ದಾರೆ. ಆದ್ದರಿಂದ ಸೌಹಾರ್ದಯುತವಾಗಿ ಬಿಜೆಪಿಗೆ ಸೇರಿ ಮುಂದಿನ ದಿನಗಳಲ್ಲಿ ಬೇರೆ ಸ್ಥಾನವನ್ನು ಪಡೆದುಕೊಂಡು ಇರುವುದು ಶ್ರೇಯಸ್ಕರ ಎಂದು ಸುಮಲತಾ ನಿರ್ಧರಿಸಿದ್ದಾರೆ.
Leave A Reply