ಸ್ಮೃತಿ ಇರಾನಿ ವಿರುದ್ಧ ರಾಬರ್ಟ್ ವಾದ್ರಾ ಸಜ್ಜು?
ಗಾಂಧಿ ಕುಟುಂಬದ ಸದಸ್ಯನಾಗಿದ್ದು, ತುಂಬಾ ಸಮಯ ರಾಜಕೀಯದಿಂದ ದೂರ ಇರುವುದು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ, ಪ್ರಿಯಾಂಕಾ ವಾದ್ರಾ ಅವರ ಗಂಡ ರಾಬರ್ಟ್ ವಾದ್ರಾ ಸುದ್ದಿವಾಹಿನಿಗಳಿಗೆ ಹೇಳಿದ್ದಾರೆ.
ಅಮೇಠಿಯ ಜನರು ಭಾರತೀಯ ಜನತಾ ಪಾರ್ಟಿಯ ಸಂಸದೆ ಸ್ಮೃತಿ ಇರಾನಿಯನ್ನು ಗೆಲ್ಲಿಸಿದ್ದಕ್ಕೆ ಪಶ್ಚಾತ್ತಾಪಪಡುತ್ತಿದ್ದಾರೆ. ಅಮೇಠಿ, ರಾಯಬರೇಲಿ, ಸುಲ್ತಾನಪುರ ಲೋಕಸಭಾ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಗಾಂಧಿ ಕುಟುಂಬದ ಪಾಲಿದೆ. ಅಮೇಠಿಯ ಮತದಾರರು ಸ್ಮೃತಿ ಇರಾನಿ ವಿರುದ್ಧ ಕಾಂಗ್ರೆಸ್ಸಿನಿಂದ ಸ್ಪರ್ಧಿಸುವಂತೆ ನನ್ನನ್ನು ನಿರೀಕ್ಷಿಸುತ್ತಿದ್ದಾರೆ ಎಂದು ವಾದ್ರಾ ಹೇಳಿದ್ದಾರೆ.
ಅನೇಕರು ನನ್ನ ವಿರುದ್ಧ ಅನೇಕ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಅವರಿಗೆಲ್ಲರಿಗೂ ಪಾರ್ಲಿಮೆಂಟಿನಲ್ಲಿ ಉತ್ತರ ಕೊಡುವ ಸಮಯ ಬಂದಿದೆ ಎಂದು ವಾದ್ರಾ ಹೇಳಿದ್ದಾರೆ.
ವಾದ್ರಾ ಸ್ಪರ್ಧೆಯಿಂದ ನೀರಸವಾಗಲಿದ್ದ ಅಮೇಠಿ ಚುನಾವಣೆಗೆ ಹೊಸ ರಂಗು ಬರಲಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಉದ್ಯಮಿ ರಾಬರ್ಟ್ ವಾದ್ರಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಅದು ಎಷ್ಟರಮಟ್ಟಿಗೆ ಸಾಧ್ಯವಾಗಿದೆ ಎನ್ನುವುದರ ಮಾಹಿತಿ ಇಲ್ಲ. ಈಗ ರಾಬರ್ಟ್ ವಾದ್ರಾ ನೇರ ರಾಜಕಾರಣಕ್ಕೆ ಬರುವುದರಿಂದ ಮುಂದಿನ ದಿನಗಳಲ್ಲಿ ಚುನಾವಣಾ ರಾಜಕೀಯ ವಿಶೇಷವಾಗಲಿದೆ. ಆದರೆ ವಾದ್ರಾ ಅಮೇಠಿಯಿಂದ ಗೆಲ್ಲುತ್ತಾರಾ ಎನ್ನುವುದು ಪ್ರಶ್ನೆ. ಇನ್ನು ಇಡೀ ಗಾಂಧಿ ಕುಟುಂಬ ಉತ್ತರ ಪ್ರದೇಶ ರಾಜಕೀಯದಿಂದ ಗುಳೆ ಎದ್ದು ಹೋಗಿರುವ ಈ ಕಾಲಘಟ್ಟದಲ್ಲಿ ಅಮೇಠಿ ಮೂಲಕ ರಾಜಕೀಯ ಇನ್ಸಿಂಗ್ಸ್ ಆರಂಭಿಸುವ ರಿಸ್ಕಿಗೆ ವಾದ್ರಾ ಮುಂದಾಗುತ್ತಿರುವುದು ನಿಜಕ್ಕೂ ಸೋಜಿಗ!
Leave A Reply