ಕಾಶೀ ವಾರಣಾಸಿಯಲ್ಲಿ ಅರ್ಚಕರ ದಿರಿಸಿನಲ್ಲಿ ಪೊಲೀಸರು!
ಯಾವುದೇ ಪ್ರಮುಖ ಬೃಹತ್ ದೇವಾಲಯಗಳಿಗೆ ನೀವು ಭೇಟಿ ನೀಡುವಾಗ ಅಲ್ಲಿ ಸರಕಾರಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ದೇವಾಲಯದ ಒಳಗೆ ಭಕ್ತರ ಸರದಿ ಸಾಲುಗಳನ್ನು ಶಿಸ್ತುಬದ್ಧವಾಗಿ ಮತ್ತು ವೇಗವಾಗಿ ಮುಂದಕ್ಕೆ ನೂಕಲು ಮತ್ತು ಬೇಗ ಬೇಗ ಭಕ್ತರ ಸಾಲನ್ನು ಮುಗಿಸಲು ಕೆಲಸ ಮಾಡುತ್ತಲೇ ಇರುತ್ತಾರೆ. ಅವರು ಪೊಲೀಸ್ ಸಮವಸ್ತ್ರದಲ್ಲಿ ಇರುವುದರಿಂದ ನಿಮಗೆ ಅವರು ಪೊಲೀಸರೆಂದು ಗೊತ್ತಾಗುತ್ತದೆ.
ಆದರೆ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೊಲೀಸರಿಗೆ ಅರ್ಚಕರ ಉಡುಗೆ ತೊಡುಗೆಯಲ್ಲಿ ಇರುವಂತೆ ವಾರಣಾಸಿ ಪೊಲೀಸ್ ಕಮೀಷನರ್ ಮೋಹಿತ್ ಅಗರವಾಲ್ ಸೂಚಿಸಿದ್ದಾರೆ. ಪುರುಷ ಪೊಲೀಸರು ಧೋತಿ – ಕುರ್ತಾ ಧರಿಸಿದರೆ, ಮಹಿಳಾ ಪೊಲೀಸರು ಸಲ್ವಾರ್ ಕುರ್ತಾ ಧರಿಸಿದ್ದಾರೆ.
ದೇಗುಲಗಳಲ್ಲಿ ಪೊಲೀಸರ ಕರ್ತವ್ಯವು ಇತರ ಸ್ಥಳಗಳಿಗಿಂತ ಭಿನ್ನವಾಗಿದೆ. ಇಲ್ಲಿ ಪೊಲೀಸರು ವಿವಿಧ ರೀತಿಯ ಜನಸಂದಣಿಯೊಂದಿಗೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಇಲ್ಲಿ ಜನಸಂದಣಿ ಇರುವುದು ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸಲು ಅಲ್ಲ. ಜನರಿಗೆ ಸುಲಭ ದರ್ಶನವನ್ನು ಖಚಿತಪಡಿಸಲು ಮತ್ತು ಅವರಿಗೆ ಮಾರ್ಗದರ್ಶನ ಮಾಡಿ ಸಹಾಯ ಮಾಡಲು ಪೊಲೀಸರು ಇರುತ್ತಾರೆ ಎಂದು ಅಗರವಾಲ್ ಹೇಳಿದ್ದಾರೆ. ಪೊಲೀಸರು ತಳ್ಳಿದರೆ ಭಕ್ತರಿಗೆ ನೋವಾಗುತ್ತದೆ. ಅರ್ಚಕರಿಂದ ಅದೇ ಕೆಲಸ ಮಾಡಿದರೆ ಅದನ್ನು ಸಕರಾತ್ಮಕವಾಗಿ ತೆಗೆದುಕೊಳ್ಳುತ್ತಾರೆ. ಪುರೋಹಿತರ ಉಡುಪಿನಲ್ಲಿ ಪೊಲೀಸರನ್ನು ನಿಯೋಜಿಸಿದರೆ ಜನರಿಗೆ ಅವರು ತಳ್ಳಿದರೂ ಬೇಸರವಾಗುವುದಿಲ್ಲ ಎಂದು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.
ಆದರೆ ಈ ಕ್ರಮವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಖಂಡಿಸಿದ್ದಾರೆ. ಪೊಲೀಸ್ ಕಮೀಷನರ್ ಕೃತ್ಯ ಖಂಡನೀಯ, ಸರಕಾರ ತಕ್ಷಣ ಆ ಅಧಿಕಾರಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.
Leave A Reply