ಹೈಕಮಾಂಡ್ ಹೇಳಿದರೆ ಸಿಎಂ ಕುರ್ಚಿ ಬಿಡುವೆ ಎಂದ ಸಿದ್ದರಾಮಯ್ಯ ಕೊಟ್ಟ ಸುಳಿವೇನು?
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ರಾಜ್ಯದ ಕಾಂಗ್ರೆಸ್ ಸರಕಾರದ ಹಲವು ಸಚಿವರ ಕುಟುಂಬದವರು ಕಣಕ್ಕೆ ಇಳಿದಿರುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಈ ಸಲ ಸಚಿವರು ಹೇಳಿದ ವ್ಯಕ್ತಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದೆ. ಈಗ ಆ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಯೂ ಆಯಾ ಸಚಿವರ ಮೇಲಿದೆ. ಅದರೊಂದಿಗೆ ಕರ್ನಾಟಕದಿಂದ ಕನಿಷ್ಟ 20 ಸೀಟುಗಳನ್ನು ಗೆಲ್ಲಲೇಬೇಕೆಂಬ ಟಾಸ್ಕನ್ನು ಹೈಕಮಾಂಡ್ ಸಿದ್ದು ಹಾಗೂ ಡಿಕೆಶಿ ಹೆಗಲಿಗೆ ಹಾಕಿದೆ. ಒಂದು ವೇಳೆ ಅಷ್ಟು ಸೀಟುಗಳು ಬರದಿದ್ದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆಯಾ? ಹೊಸ ಮಂತ್ರಿಮಂಡಲದ ರಚನೆ ಆಗುತ್ತದೆಯಾ? ಈ ಪ್ರಶ್ನೆಗಳಿಗೆ ಜೂನ್ 4 ರ ಸಂಜೆಯ ಬಳಿಕ ಉತ್ತರ ಸಿಗಬಹುದು.
ಆದರೆ ಒಂದು ವೇಳೆ ತಮ್ಮ ಕುಟುಂಬದವರು ನಿಂತ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತರೆ ಆ ಸಚಿವರ ತಲೆದಂಡವಾಗುವುದಿದ್ದರೆ ಒಟ್ಟಾರೆ ರಾಜ್ಯದಲ್ಲಿ ಕಾಂಗ್ರೆಸ್ ಎರಡಂಕಿಗೆ ತಲುಪದಿದ್ದರೆ ಸಿದ್ಧರಾಮಯ್ಯ ಕೆಳಗಿಳಿಯಬೇಕಾದ ಒತ್ತಡ ಸೃಷ್ಟಿಯಾಗಲಿದೆಯಾ? ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನು ಸಿದ್ದು – ಡಿಕೆಶಿ ತಂಡಗಳಿಗೆ ಹಂಚಿಕೊಟ್ಟಾಗಿದೆ. ಯಾರ ಮೇಲ್ವಿಚಾರಣೆಯ ಕ್ಷೇತ್ರಗಳು ಎಷ್ಟು ಗೆಲ್ಲುತ್ತದೆ ಎನ್ನುವುದರ ಮೇಲೆ ಸಿದ್ದು ಸಿಎಂ ಭವಿಷ್ಯ ಅಡಗಿದೆಯಾ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಇನ್ನು ಮತದಾನಕ್ಕೆ ದಿನಗಳು ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಲೆಕ್ಕಾಚಾರಗಳು 20 ಸೀಟಿನ ತನಕ ತಾವು ಹೋಗುವುದಿಲ್ಲ ಎನ್ನುವ ಸುಳಿವು ನೀಡಿವೆ. ಸಿಎಂ ಒಂದು ಹೆಜ್ಜೆ ಮುಂದೆ ಹೋಗಿ ” ಮೈತ್ರಿಕೂಟಕ್ಕೆ ಸಂಪೂರ್ಣ ಬಹುಮತ ಸಿಗದೇ ಇರಬಹುದು. ಆದರೆ ಕೇಂದ್ರದಲ್ಲಿ ಸರಕಾರ ರಚಿಸಲು ಎನ್ ಡಿಗೂ ಸಾಕಷ್ಟು ಸ್ಥಾನಗಳು ಸಿಗುವುದಿಲ್ಲ ” ಎಂದು ಅತಂತ್ರ ಲೋಕಸಭೆಯ ಸುಳಿವು ನೀಡಿದ್ದಾರೆ.
Leave A Reply