ಮೋದಿ ಮಂಗಳೂರಿಗೆ ಯಾಕೆ ಬಂದ್ರು?
ಮಂಗಳೂರಿನಲ್ಲಿ ಯಾರಿಗೆ ಹೆದರಿ ಮೋದಿ ಬರಿ ರೋಡ್ ಶೋ ಮಾಡಿದ್ದು!
ಇಂತಹ ಒಂದು ವಾಕ್ಯವನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿಗರು ಹರಿಯಬಿಟ್ಟಿದ್ದಾರೆ. ಇರಲಿ, ಅವರವರ ಖುಷಿಗೆ, ಸಮಾಧಾನಕ್ಕೆ ಹೇಳಿಕೊಂಡರೆ ಅದರಿಂದ ಯಾರಿಗೂ ಏನೂ ತೊಂದರೆ ಇಲ್ಲ. ಆದರೆ ಏಪ್ರಿಲ್ 14 ರ ಭಾನುವಾರ ಮೋದಿ ಮಂಗಳೂರಿಗೆ ಬರುವ ಮೊದಲು ಅವರ ಕಾರ್ಯಕ್ರಮಗಳ ಪಟ್ಟಿ ಹೇಗಿತ್ತು ಎಂದು ನೋಡಿದರೆ ಆಗ ಮಂಗಳೂರಿಗೆ ಅವರು ಬಂದದ್ದೇ ಆಶ್ಚರ್ಯ ಎನ್ನುವಂತಿತ್ತು. ಆ ವೇಳಾಪಟ್ಟಿಯ ಬಗ್ಗೆ ತಿಳಿಯುವ ಮೊದಲು ಒಂದು ಫ್ಲಾಶ್ ಬ್ಯಾಕ್ ನೋಡಿಕೊಂಡು ಬರೋಣ.
ಮೋದಿ ಬರೋಬ್ಬರಿ ಒಂದು ತಿಂಗಳ ಮೊದಲು ಶಿವಮೊಗ್ಗದಲ್ಲಿ ಸಮಾವೇಶ ಮಾಡಿ ಕರ್ನಾಟಕದಲ್ಲಿ ಪ್ರಚಾರವನ್ನು ಅದ್ದೂರಿಯಾಗಿ ಆರಂಭಿಸಿದ್ದಾರೆ. ಆಗ ಶಿವಮೊಗ್ಗದ ಅಕ್ಕಪಕ್ಕದ ಕ್ಷೇತ್ರಗಳ ಅಭ್ಯರ್ಥಿಗಳಿಗೂ ವೇದಿಕೆಯ ಮೇಲೆ ಆಹ್ವಾನವಿತ್ತು. ಆವತ್ತೇ ಬ್ರಿಜೇಶ್ ಚೌಟ ಮೋದಿಗೆ ಹಾರ ಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಡಿತ್ತು. ಮೋದಿ ಒಂದು ಕ್ಷೇತ್ರದಲ್ಲಿ ಸಮಾವೇಶ ಮಾಡಿದರೆ ಅದರ ಅಕ್ಕಪಕ್ಕದಲ್ಲಿರುವ ಕ್ಷೇತ್ರದಲ್ಲಿ ಮತ್ತೆ ಸಮಾವೇಶ ಮಾಡಲು ಹೋಗುವುದಿಲ್ಲ. ಯಾಕೆಂದರೆ ಅವರಿಗೆ ಇಡೀ ದೇಶದಲ್ಲಿ 543 ಕ್ಷೇತ್ರಗಳಿವೆ. ಅದರೊಂದಿಗೆ ಬೇರೆ ಕಾರ್ಯಕ್ರಮಗಳು ಇರುತ್ತವೆ. ಒಟ್ಟು ಇರುವ ಸುಮಾರು 80 ದಿನಗಳ ಆಸುಪಾಸಿನಲ್ಲಿ ಮೋದಿ ಎಷ್ಟು ಕಡೆ ತಾನೆ ಹೋಗಲು ಸಾಧ್ಯ?
ಮೋದಿ ಮಂಗಳೂರಿಗೆ ಯಾಕೆ ಬಂದ್ರು?
ಹೀಗಿರುವಾಗ ಮೋದಿ ಮತ್ತೆ ಮಂಗಳೂರಿಗೆ ಬರಲ್ಲ ಎಂದೇ ಎಲ್ಲರೂ ಅಂದುಕೊಂಡಿದ್ದರು. ಇದನ್ನು ತಮ್ಮ ಲಾಭಕ್ಕೆ ಬಳಸಿಕೊಂಡ ದಕ್ಷಿಣ ಕನ್ನಡ ಕಾಂಗ್ರೆಸ್ಸಿಗರು ಇಲ್ಲಿ ಬಿಜೆಪಿ ಸೋಲುತ್ತದೆ. ಅದರ ಸುಳಿವು ಸಿಕ್ಕಿದ ಕಾರಣ ಮೋದಿ ಬರಲ್ಲ ಎಂದು ಸಾರುತ್ತಾ ಬಂದರು. ಯಾವಾಗ ಮೋದಿ ಸಮಾವೇಶ ಬಂಗ್ರಕುಳೂರಿನಲ್ಲಿ ನಡೆಯುತ್ತದೆ ಎಂದು ಸುದ್ದಿ ಹಬ್ಬಿತ್ತೋ ಕಾಂಗ್ರೆಸ್ಸಿಗರು ತಲೆ ಮೇಲೆ ಕೈ ಹೊತ್ತುಕೊಂಡರು. ಬಾಯಿಗೆ ತಂದುಕೊಂಡಿದ್ದ ತುತ್ತು ಕೈ ಜಾರಿದ ಅನುಭವವಾಗಿತ್ತು. ಆ ಬಳಿಕ ಸಮಾವೇಶ ರದ್ದಾಗಿ ರೋಡ್ ಶೋ ಎಂದು ಫಿಕ್ಸ್ ಆದ ಕೂಡಲೇ ಸಮಾವೇಶಕ್ಕೆ ಜನ ಬರಲ್ಲ ಎನ್ನುವ ಹೆದರಿಕೆಯಿಂದ ರೋಡ್ ಶೋಗೆ ಬದಲಾಯಿಸಿದ್ದಾರೆ ಎಂದು ಮತ್ತೆ ಖುಷಿಪಟ್ಟರು. ಈಗ ರೋಡ್ ಶೋಗೆ ಸೇರಿದ ಜನರನ್ನು ನೋಡಿ ಅದು ಎ1 ತಂತ್ರಜ್ಞಾನದಿಂದ ಸೃಷ್ಟಿಸಿದ ಕೃತಕ ದೃಶ್ಯ ಎಂದು ಮತ್ತೆ ಪೋಸ್ಟರ್ ಮಾಡಿ ವೈರಲ್ ಮಾಡುತ್ತಿದ್ದಾರೆ.
ಮೋದಿಯವರ ಚುನಾವಣಾ ಪ್ರಚಾರದ ಯಾವುದೇ ವೇಳಾಪಟ್ಟಿಯನ್ನು ತಯಾರಿಸುವುದಕ್ಕೆ ಅವರದ್ದೇ ಟೀಮ್ ಇದೆ. ಅದು ಆಯಾ ಕ್ಷೇತ್ರದ ಮುಖಂಡರಿಗೆ ಕೆಲವು ದಿನಗಳ ಮುಂಚೆ ಮಾಹಿತಿ ನೀಡುತ್ತದೆ. ಒಂದು ವೇಳೆ ಸಮಾವೇಶವೇ ಮಾಡಬೇಕು ಎಂದರೂ ಇಲ್ಲಿನವರು ಅದಕ್ಕೆ ರೆಡಿ ಇರಬೇಕು, ರೋಡ್ ಶೋ ಮಾತ್ರ ಸಾಕು ಎಂದರೂ ತುಟಿಕ್ ಪಿಟಿಕ್ ಎನ್ನದೇ ಒಪ್ಪಬೇಕು. ಯಾವುದೇ ಸ್ಥಳೀಯ ನಾಯಕರು ತಾವು ಹೇಳಿದ ಹಾಗೆ ಅದನ್ನು ಬದಲಾಯಿಸಿಕೊಳ್ಳಲು ಆಗುವುದಿಲ್ಲ. ಮೊನ್ನೆ ಏಪ್ರಿಲ್ 14 ರ ಭಾನುವಾರ ಮೋದಿಯವರು ಬೆಳಿಗ್ಗೆ ದೆಹಲಿಯ ಸಂಸತ್ ಹೊರಗೆ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿ, ಅಲ್ಲಿಂದ ಭಾರತೀಯ ಜನತಾ ಪಾರ್ಟಿಯ ಕೇಂದ್ರ ಕಚೇರಿಯಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ, ಅಲ್ಲಿಂದ ಮಧ್ಯಪ್ರದೇಶದ ಭೂಪಾಲದಲ್ಲಿ ಪ್ರಚಾರ ನಡೆಸಿ, ಅಲ್ಲಿಂದ ಕರ್ನಾಟಕದ ಮೈಸೂರಿಗೆ ಬಂದು ಅಲ್ಲಿ ಪ್ರಚಾರ ಮುಗಿಸಿ, ಅಲ್ಲಿಂದ ಮಂಗಳೂರಿಗೆ ಬಂದು ಇಷ್ಟು ಕಾರ್ಯಕ್ರಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ.
ಸಮಾನ ಮನಸ್ಕ ಸಂಘಟನೆಗಳ ಒಗ್ಗಟ್ಟು!
ಇನ್ನು ಮಂಗಳೂರಿನಲ್ಲಿ ಮೊನ್ನೆ ಸೇರಿದ್ದ ಜನರ ಒಟ್ಟು ಸಂಖ್ಯೆ ಅಂದಾಜು ಲಕ್ಷ ದಾಟಿತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಅದರ ನಂತರ ಬಿಜೆಪಿಯನ್ನು ಸೋಲಿಸಬೇಕೆಂಬ ಏಕೈಕ ಉದ್ದೇಶದಿಂದ ಸಮಾನ ಮನಸ್ಕ ಸಂಘಟನೆಗಳು ಪುರಭವನದಲ್ಲಿ ಸೇರಿ ಕೈ ಕೈ ಹಿಡಿದು ಶಕ್ತಿ ಪ್ರದರ್ಶನ ನಡೆಸಿದ್ದವು. ಅಂದಾಜು 25 ಸಂಘಟನೆಗಳು ಸೇರಿದ್ದರೂ ಪುರಭವನದಲ್ಲಿ ಎಷ್ಟು ಜನ ಪ್ರೇಕ್ಷಕರಿದ್ದರು ಎನ್ನುವುದಕ್ಕೆ ಫೋಟೋಗಳೇ ಕಥೆ ಹೇಳುತ್ತವೆ. ಇನ್ನು ನೆಹರೂ ಪಿಎಂ ಆಗಿದ್ದಾಗ ಇಲ್ಲಿ ಸಂಸದರಾಗಿದ್ದ ಶ್ರೀನಿವಾಸ ಮಲ್ಯ ಅವರು ದಕ್ಷಿಣ ಕನ್ನಡಕ್ಕೆ ಹಲವು ಯೋಜನೆ ತಂದಿದ್ದಾರೆ ಎಂದು ಕಾಂಗ್ರೆಸ್ಸಿಗರು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಅದರ ನಂತರ ಆಯ್ಕೆಯಾದ ಬೇರೆ ಕಾಂಗ್ರೆಸ್ ಸಂಸದರು ಏನು ಮಾಡಿದ್ದಾರೆ ಎಂದು ಯಾರೂ ಹೇಳುತ್ತಿಲ್ಲ. ರಾಜಕೀಯದಲ್ಲಿ ಮೋದಿ ಗಾಂಧಿ ಕುಟುಂಬಕ್ಕೆನೆ ಹೆದರಿಲ್ಲ, ಹಾಗಿರುವಾಗ ಮಂಗಳೂರಿನಲ್ಲಿ ರಾಜಕೀಯದ ಎಳೆಕೂಸು ತನಗೆ ಹೆದರಿ ಮೋದಿ ಬರಿ ರೋಡ್ ಶೋ ಮಾಡಿದ್ರು ಎಂದು ಹೇಳಿಕೊಂಡು ತಿರುಗುವುದೇ ಸದ್ಯದ ಕಾಮಿಡಿ!
Leave A Reply