ಎಲ್ಲವೂ ದೆಹಲಿಯಲ್ಲಿ ನಿರ್ಧಾರ ಆಗಿದೆ, ಕೆಲವು ದಿನ ಕಾಯಿರಿ ಎಂದ್ರು ಡಿಕೆಶಿ!
ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಒಕ್ಕಲಿಗ ಸಂಘದ ಸಭೆಯಲ್ಲಿ ” ಎಲ್ಲವೂ ದೆಹಲಿಯಲ್ಲಿ ನಿರ್ಧಾರ ಆಗಿದೆ. ಕೆಲವು ದಿನ ಕಾಯಿರಿ” ಎಂದು ಹೇಳಿದ್ದಾರೆ. ಈ ವಾಕ್ಯದ ಅರ್ಥ ಬಹಳ ಸ್ಪಷ್ಟವಾಗಿದ್ದು, ಲೋಕಸಭಾ ಚುನಾವಣೆಯ ಬಳಿಕ ಯಾವುದೇ ಸಂದರ್ಭದಲ್ಲಿಯೂ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗ್ತಾರಾ ಎನ್ನುವ ಅಭಿಪ್ರಾಯ ದಟ್ಟವಾಗಿದೆ.
ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಭರವಸೆಯಿಂದ ಈ ಬಾರಿ ಒಕ್ಕಲಿಗ ಸಮುದಾಯ ಕಾಂಗ್ರೆಸ್ ಪಕ್ಷದೊಂದಿಗೆ ಗಟ್ಟಿಯಾಗಿ ನಿಂತ ಕಾರಣ ಕಳೆದ ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬೀಗಿತ್ತು. ಇವತ್ತಿಗೂ ಕರ್ನಾಟಕದಲ್ಲಿ ಒಕ್ಕಲಿಗರ ಅಧಿಪತಿ ಯಾರು ಎನ್ನುವ ಪ್ರಶ್ನೆಗೆ ನಿಸ್ಸಂಶಯವಾಗಿ ಅದು ದೇವೆಗೌಡರು ಎನ್ನುವ ಉತ್ತರ ಬರುತ್ತದೆ. ಆದರೆ ಕಳೆದ ವರ್ಷ ಯಾವ ರೀತಿಯ ವಾತಾವರಣ ಮೂಡಿತ್ತು ಎಂದರೆ ಜೆಡಿಎಸ್ ವೋಟ್ ಬ್ಯಾಂಕ್ ಆಗಿದ್ದ ಒಕ್ಕಲಿಗರು ಹಾಗೂ ಇತ್ತ ಅಲ್ಪಸಂಖ್ಯಾತರು ಎರಡೂ ಸಮುದಾಯದವರು ಏಕಕಾಲದಲ್ಲಿ ಕಾಂಗ್ರೆಸ್ ಬೆನ್ನಿಗೆ ನಿಂತರು. ನಾವು ಜೆಡಿಎಸ್ ಗೆ ಮತ ನೀಡಿ ಒಂದು ವೇಳೆ ಅತಂತ್ರ ಸರಕಾರ ಬಂದರೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸರಕಾರ ಮಾಡುತ್ತೆ ಎಂದು ಅಲ್ಪಸಂಖ್ಯಾತರು ಜೆಡಿಎಸ್ ಜೊತೆಗೆ ಹೋಗಲಿಲ್ಲ. ಇತ್ತ ಡಿಕೆಶಿ ಸಿಎಂ ಆದರೆ ಸಮುದಾಯಕ್ಕೆ ಒಳ್ಳೆಯದು ಎಂದು ಒಕ್ಕಲಿಗರು ಸಾರಾಸಗಟಾಗಿ ಕಾಂಗ್ರೆಸ್ಸಿಗೆ ಬೆಂಬಲಿಸಿದರು. ಆದರೆ ಸರಕಾರವೇನೋ ಕಾಂಗ್ರೆಸ್ಸಿನದ್ದು ಬಂತು. ಆದರೆ ಡಿಕೆಶಿ ಮುಖ್ಯಮಂತ್ರಿಯಾಗಲಿಲ್ಲ. ಆದ್ದರಿಂದ ಬೇಸರಗೊಂಡಿರುವ ಒಕ್ಕಲಿಗರು ಈ ಬಾರಿ ಜೆಡಿಎಸ್ ಜೊತೆ ಹೋದರೆ ಕಷ್ಟ ಎಂದುಕೊಂಡಿರುವ ಡಿಕೆಶಿ ತಾವು ಶೀಘ್ರದಲ್ಲಿ ಮುಖ್ಯಮಂತ್ರಿ ಆಗುವ ಸುಳಿವನ್ನು ಕೊಟ್ರಾ ಎನ್ನುವುದು ಈಗ ರಾಜಕೀಯ ವಲಯದಲ್ಲಿ ಉದ್ಭವಿಸಿರುವ ಪ್ರಶ್ನೆ.
Leave A Reply