ದರ್ಶನ್ ಮಂಡ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರು ಪರ!
ಯಾರ್ರೀ ಡಿ ಬಾಸ್, ಮಂಡ್ಯದಲ್ಲಿ ಯಾವ ಬಾಸು ನಡೆಯುವುದಿಲ್ಲ ಎಂದು ಕಳೆದ ಬಾರಿ ಎಚ್ ಡಿ ಕುಮಾರಸ್ವಾಮಿಯವರು ಮಂಡ್ಯದಲ್ಲಿ ತಮ್ಮ ಮಗನ ವಿರುದ್ಧವಾಗಿ ಸುಮಲತಾ ಅಂಬರೀಷ್ ಪರ ಚುನಾವಣಾ ಪ್ರಚಾರ ಮಾಡುತ್ತಿದ್ದ ದರ್ಶನ್ ವಿರುದ್ಧ ಗುಡುಗಿದ್ದರು. ಆ ವಿಡಿಯೋ ಈ ಬಾರಿ ಮತ್ತೆ ವೈರಲ್ ಆಗುತ್ತಿದೆ. ಇದೇ ಸಮಯದಲ್ಲಿ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಅದೇ ಮಂಡ್ಯದಲ್ಲಿ ಪ್ರಚಾರ ಮಾಡುತ್ತಿರುವುದು ಕಾಕತಾಳೀಯವೇ ಅಥವಾ ಉದ್ದೇಶಪೂರ್ವಕವೇ ಎನ್ನುವುದು ರಾಜಕೀಯ ವಿಶ್ಲೇಷಣೆ ಮಾಡಬಹುದಾದ ಸಂಗತಿ.
ಈ ಬಾರಿ ಮಂಡ್ಯದಲ್ಲಿ ರಾಜಕೀಯ ವಾತಾವರಣವೇ ಉಲ್ಟಾ ಆಗಿದೆ. ಹಿಂದಿನ ಲೋಕಸಭಾ ಚುನಾವಣೆಯ ಮೇಲೆ ಪರಸ್ಪರ ವಿರೋಧಿ ಪಾಳಯದಲ್ಲಿದ್ದ ಸುಮಲತಾ ಹಾಗೂ ಕುಮಾರಸ್ವಾಮಿ ಈಗ ಮೈತ್ರಿಪಕ್ಷದಲ್ಲಿದ್ದಾರೆ. ಇನ್ನು ಸುಮಲತಾ ಅವರಿಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ. ಅವರು ಇಲ್ಲಿಯ ತನಕ ಬೇರೆ ಕ್ಷೇತ್ರಗಳಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದಾರೆಯೇ ಹೊರತು ಮಂಡ್ಯದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಕುಮಾರಸ್ವಾಮಿ ಪರ ಏನೂ ಪ್ರಚಾರಕ್ಕೆ ಇಳಿದಿಲ್ಲ.
ಅಮ್ಮಾ ಏನ್ ಹೇಳ್ತಾರೆಯೋ ಹಾಗೆ ಎನ್ನುತ್ತಿದ್ದ ದರ್ಶನ್ ಈ ಬಾರಿ ಮಂಡ್ಯದಲ್ಲಿ “ಅಮ್ಮ”ನ ವಿರೋಧಿ ಪಕ್ಷ ಕಾಂಗ್ರೆಸ್ಸಿನ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರಕ್ಕೆ ಇಳಿದಿದ್ದಾರೆ. ತಾನು ಕಾಂಗ್ರೆಸ್ ಪರ ಪ್ರಚಾರಕ್ಕೆ ಬಂದಿಲ್ಲ. ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದೇನೆ ಎಂದು ಹೇಳುತ್ತಿರುವ ದರ್ಶನ್ ಅವರು ಇದಕ್ಕಾಗಿ ಸುಮಲತಾ ಅವರ ಬಳಿ ಅನುಮತಿ ಕೇಳಿದ್ದಾರಾ ಅಥವಾ ಸ್ವನಿರ್ಧಾರವಾ ಎನ್ನುವುದು ತಿಳಿಯುತ್ತಿಲ್ಲ. ಒಂದು ವೇಳೆ ಸುಮಲತಾ ಕಾಂಗ್ರೆಸ್ ಪರ ಪ್ರಚಾರ ಮಾಡಬೇಡಾ ಎಂದಿದ್ದರೆ ದರ್ಶನ್ ಮಾಡುತ್ತಿರಲಿಲ್ಲವೇ? ಹಾಗಾದರೆ ಸುಮಲತಾ ಮೌನ ಸಮ್ಮತಿ ಇದೆಯಾ ಎನ್ನುವುದು ಈಗ ಇರುವ ಪ್ರಶ್ನೆ
Leave A Reply