ಸೂರತ್ ನಂತರ ಈಗ ಇಂದೋರ್: ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಘಾತ!
ಸೂರತ್ ನಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾದ ನಂತರ ಈಗ ಅದು ಮಧ್ಯಪ್ರದೇಶದಲ್ಲಿಯೂ ಪುನರಾವರ್ತನೆಯಾಗುತ್ತದೆಯೋ ಎಂಬ ಭಾವನೆ ವ್ಯಕ್ತವಾಗುತ್ತಿದೆ. ಇಂದೋರ್ ಕಾಂಗ್ರೆಸ್ ಅಭ್ಯರ್ಥಿ ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮಧ್ಯಪ್ರದೇಶದಲ್ಲಿ ದೊಡ್ಡ ಆಘಾತ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅಕ್ಷತ್ ಕ್ರಾಂತಿ ಕಣಕ್ಕೆ ಇಳಿದಿದ್ದರು. ಮೇ 13 ರಂದು ಇಂದೋರ್ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿತ್ತು. ಏಪ್ರಿಲ್ 29 ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು ಕೊನೆಯ ದಿನವಾಗಿತ್ತು. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.
ಅವರು ಯಾವುದೇ ಕ್ಷಣದಲ್ಲಿಯೂ ಭಾರತೀಯ ಜನತಾ ಪಾರ್ಟಿಗೆ ಸೇರುವ ಸೂಚನೆಗಳು ಸಿಗುತ್ತಿವೆ. ಮಧ್ಯಪ್ರದೇಶದ ಹಿರಿಯ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಅವರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಅಕ್ಷತ್ ಕ್ರಾಂತಿ ಕಾರಿನಲ್ಲಿ ತೆರಳುತ್ತಿರುವ ಫೋಟೋ ವೈರಲ್ ಆಗಿದೆ.
ಇನ್ನು ಕಾಂಗ್ರೆಸ್ ಆ ಕ್ಷೇತ್ರದಿಂದ ಕಣಕ್ಕೆ ಇಳಿಸಿದ್ದ ಡಮ್ಮಿ ಅಭ್ಯರ್ಥಿಯ ನಾಮಪತ್ರ ನಿನ್ನೆಯೇ ತಿರಸ್ಕೃತಗೊಂಡಿತ್ತು. ಆದ್ದರಿಂದ ಕಾಂಗ್ರೆಸ್ಸಿನಿಂದ ಅಧಿಕೃತ ಅಭ್ಯರ್ಥಿಯೇ ಉಳಿದಂತಾಗಿತ್ತು. ಆದರೆ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳುವ ಕೊನೆಯ ದಿನ ಕಾಂಗ್ರೆಸ್ ಪಕ್ಷಕ್ಕೆ ಊಹಿಸಲಾರದ ಹೊಡೆತ ಸಿಕ್ಕಿದೆ. ಇನ್ನು ಅಲ್ಲಿ ಪಕ್ಷೇತರ ಅಭ್ಯರ್ಥಿಗಳು ಒಂದಿಷ್ಟು ಜನ ಇದ್ದು, ಅವರು ಕೂಡ ಹಿಂದಕ್ಕೆ ಪಡೆದುಕೊಂಡರೆ ಇಂದೋರ್ ಮತ್ತೊಂದು ಸೂರತ್ ಆಗಲಿದೆ.
ಚುನಾವಣೆಯ ಇನ್ನೂ ಮೂರನೇ ಹಂತದ ಮೊದಲೇ ಇಬ್ಬರು ಬಿಜೆಪಿ ಸಂಸದರು ಆಯ್ಕೆಯಾದಂತೆ ಆಗಿದೆ. ಬಿಜೆಪಿಯಲ್ಲಿ ಈ ಬಗ್ಗೆ ಸಂಭ್ರಮದ ವಾತಾವರಣ ಮೂಡಿದ್ದರೆ ಕಾಂಗ್ರೆಸ್ ಇದರಿಂದ ಚಿಂತಿಗೀಡಾಗಿದೆ.
Leave A Reply