ಪ್ರಜ್ವಲ್ ರೇವಣ್ಣ ವಿಷಯದಲ್ಲಿ ತಮ್ಮ ಹೆಸರು ಬಳಸದಂತೆ ಕೋರ್ಟ್ ತಡೆ ತಂದ ಎಚ್ ಡಿಡಿ, ಎಚ್ ಡಿಕೆ…
ಜೆಡಿಎಸ್ ನಿಂದ ಅಮಾನತಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಧ್ಯಮಗಳು ತಮ್ಮ ಹೆಸರು ಬಳಸಿಕೊಳ್ಳದಂತೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಪುತ್ರ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣ ಬಯಲಿಗೆ ಬಂದ ನಂತರ ದೊಡ್ಡಗೌಡರ ಇಡೀ ಕುಟುಂಬ ಮಾನಸಿಕವಾಗಿ ಜರ್ಜರಿತವಾಗಿತ್ತು. ಅದರೊಂದಿಗೆ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಾಧ್ಯಮದಲ್ಲಿಯೂ ಇದು ಸಾಕಷ್ಟು ಚರ್ಚೆ, ಆರೋಪ, ವ್ಯಂಗ್ಯ, ರಂಗುರಂಗಾಗಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಇಡೀ ಗೌಡರ ಕುಟುಂಬ ಮುಜುಗರಕ್ಕೆ ಒಳಗಾಗಿತ್ತು. ಮಾಧ್ಯಮ ಸಂಸ್ಥೆಗಳು ಎಲ್ಲಾ ಕಡೆ ಪ್ರಜ್ವಲ್ ರೇವಣ್ಣನವರ ಸುದ್ದಿ ಪ್ರಸಾರ ಮಾಡುವಾಗ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮೊಗ ಎಂದು ಪದೇ ಪದೇ ಹೇಳುವ ವಿಚಾರದಿಂದ ದೇವೇಗೌಡರ ಆರೋಗ್ಯದಲ್ಲಿಯೂ ಏರುಪೇರಾಗಿ ಅವರು ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಬಂದಿತ್ತು. ಇದರೊಂದಿಗೆ ಮಾಜಿ ಸಿಎಂ ಕುಮಾರಸ್ವಾಮಿಯವರ ಹೆಸರನ್ನು ಕೂಡ ಈ ಪ್ರಕರಣದೊಂದಿಗೆ ಎಳೆದು ತರುತ್ತಿದ್ದರಿಂದ ಅವರ ವರ್ಚಸ್ಸಿಗೂ ದಕ್ಕೆ ಬಂದಿತ್ತು. ಈಗ ಅದನ್ನೆಲ್ಲಾ ತಪ್ಪಿಸಲು ಪ್ರಜ್ವಲ್ ಕೇಸಿನಲ್ಲಿ ಮಾಧ್ಯಮಗಳು ತಮ್ಮ ಹೆಸರು ಬಳಸದಂತೆ ತಡೆ ನೀಡುವಂತೆ ಕೋರಿ ಎಚ್ ಡಿ ದೇವೇಗೌಡ ಹಾಗೂ ಎಚ್ ಡಿ ಕುಮಾರಸ್ವಾಮಿ ಅವರು ನಗರದ 34 ನೇ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆಗೆ ಮನವಿ ಮಾಡಿದ್ದರು.
ಸಾಕ್ಷ್ಯಗಳಿಲ್ಲದೇ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸುದ್ದಿ ಪಸರಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ. ದೇವೇಗೌಡ, ಕುಮಾರಸ್ವಾಮಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಬಾರದು, ಸತ್ಯಾಂಶವಿದ್ದು, ಸಾಕ್ಷ್ಯಗಳಿದ್ದರೆ ಮಾತ್ರ ಸುದ್ದಿ ಪ್ರಸಾರ ಮಾಡಬಹುದು ಎಂದು ಕೋರ್ಟ್ ಹೇಳಿದೆ.
Leave A Reply