ಕೊನೆಗೂ ಸಂಜೆ ಬಂದು ಮತ ಚಲಾಯಿಸಿ ತೆರಳಿದ ಅನಂತಕುಮಾರ್ ಹೆಗ್ಡೆ!
ಉತ್ತರ ಕನ್ನಡ ಲೋಕಸಭಾ ಚುನಾವಣೆಗೆ ಟಿಕೆಟ್ ತಪ್ಪಿದ ಬಳಿಕ ರಾಜಕೀಯದಿಂದ ದೂರವೇ ಉಳಿದಿದ್ದ ಸಂಸದ ಅನಂತಕುಮಾರ್ ಹೆಗ್ಡೆ ಕೊನೆಗೂ ಮನೆಯಿಂದ ಹೊರಬಂದು ಮತ ಚಲಾಯಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕೆಎಚ್ ಬಿ ಕಾಲೋನಿಯ ಸರಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಪತ್ನಿ ಜೊತೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಸಾಮಾನ್ಯವಾಗಿ ಈ ಹಿಂದಿನ ಚುನಾವಣೆಗಳಲ್ಲಿ ಬೆಳಿಗ್ಗೆ 8 ಗಂಟೆಗೆಲ್ಲಾ ಮತಕೇಂದ್ರಕ್ಕೆ ಬಂದು ಮತದಾನ ಮಾಡುತ್ತಿದ್ದ ಅನಂತಕುಮಾರ್ ಹೆಗ್ಡೆ ಮೊದಲ ಬಾರಿ ಸಾವಕಾಶವಾಗಿ ಸಂಜೆ 4.30 ರ ಸುಮಾರಿಗೆ ಬಂದು ಮತ ಚಲಾಯಿಸಿದ್ದಾರೆ.
ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಲು ಅಷ್ಟೇನೂ ಆಸಕ್ತಿ ತೋರಿಸಿದ ಹೆಗ್ಡೆ, ಮತದಾನ ಮಾಡುವುದು ದೇಶದ ಜನರ ಕರ್ತವ್ಯ. ಹಾಗಾಗಿ ನಾನು ದೇಶದ ಒಬ್ಬ ಪ್ರಜೆಯಾಗಿ ಮತ ಚಲಾವಣೆ ಮಾಡಲು ಬಂದಿದ್ದೇನೆ ಎಂದು ಹೇಳಿ ತೆರಳಿದರು. ಟಿಕೆಟ್ ಕೈ ತಪ್ಪಿದ ಬಗ್ಗೆ , ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಕನ್ನಡದ ಶಿರಸಿಗೆ ಬಂದಾಗ ಏಕೆ ಕಾಣಿಸಿಕೊಳ್ಳಲಿಲ್ಲ ಎಂದು ಕೇಳಿದಾಗಲೂ ಏನೂ ಉತ್ತರಿಸದೇ ಮುಗುಳುನಗೆ ಬೀರಿ ಮುಂದೆ ಸಾಗಿದರು.
ಒಟ್ಟು ಆರು ಬಾರಿ ಸಂಸದರಾಗಿರುವ ಅವರು ಈ ಬಾರಿಯೂ ಟಿಕೆಟ್ ಸಿಕ್ಕೆ ಸಿಗುತ್ತದೆ ಎನ್ನುವ ಆಶಾಭಾವನೆಯಿಂದ ಚುನಾವಣೆ ಘೋಷಣೆಯಾಗುವ ಆರು ತಿಂಗಳ ಮೊದಲಿನಿಂದ ಪ್ರಚಾರದಲ್ಲಿ ವ್ಯಸ್ತರಾಗಿದ್ದರು. ಆದರೆ ಟಿಕೆಟ್ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲಾದ ನಂತರ ಮನೆಯಿಂದ ಹೊರಗೆ ಪ್ರಚಾರಕ್ಕೆ ಬರಲೇ ಇಲ್ಲ. ಕಾಗೇರಿಯವರು ಅನಂತ ಕುಮಾರ್ ಮನೆಯ ಹೊರಗೆ ಕಾದು ಬಂದ ದಾರಿಗೆ ಸುಂಕವಿಲ್ಲದೇ ತೆರಳಿದಂತಹ ಘಟನೆ ಕೂಡ ನಡೆಯಿತು. ಅನಂತ್ ಮೌನ ಭಾರತೀಯ ಜನತಾ ಪಾರ್ಟಿಯ ಗೆಲುವು ಮತ್ತು ಸೋಲಿನ ನಡುವೆ ಬಂಡೆಯಂತೆ ನಿಂತಿದೆ ಎನ್ನುವುದು ರಾಜಕೀಯ ಪಂಡಿತರ ಅಭಿಪ್ರಾಯ.
Leave A Reply