ಮೋದಿ ವಿರುದ್ಧ ಸ್ಪರ್ಧಿಸುತ್ತಿರುವ ಖ್ಯಾತ ಕಾಮಿಡಿಯನ್ ಯಾರು?
ವಾರಣಾಸಿ ಲೋಕಸಭಾ ಕ್ಷೇತ್ರದಿಂದಲೇ ಈ ಬಾರಿ ಕಣಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಖ್ಯಾತ ಹಾಸ್ಯ ನಟರೊಬ್ಬರು ಸ್ಪರ್ಧಿಸುತ್ತಿದ್ದಾರೆ. ನಾಗರಿಕರಿಗೆ ಪರ್ಯಾಯ ಆಯ್ಕೆ ಸಿಗಬೇಕು ಎನ್ನುವ ಕಾರಣಕ್ಕೆ ಸ್ಪರ್ಧಿಸುತ್ತಿರುವುದಾಗಿ ಅವರು ಘೋಷಿಸಿದ್ದಾರೆ. ಸೂರತ್ ಹಾಗೂ ಇನ್ನಿತರ ಕಡೆ ಆಗಿರುವ ಘಟನೆಯನ್ನು ತಪ್ಪಿಸಲು ತಾವು ನಾಮಪತ್ರ ಸಲ್ಲಿಸುತ್ತಿರುವುದಾಗಿ ಆ ವ್ಯಕ್ತಿ ಹೇಳಿದ್ದಾರೆ. ಅವರ ಹೆಸರು ಶ್ಯಾಮ್ ರಂಗೀಲಾ.
ಸೂರತ್ ಹಾಗೂ ಇಂಧೋರ್ ನಲ್ಲಿ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದುಕೊಂಡ ಕಾರಣ ಅಲ್ಲಿ ಭಾರತೀಯ ಜನತಾ ಪಾರ್ಟಿಯ ಗೆಲುವಿನ ಹಾದಿ ಸುಗಮವಾಗಿತ್ತು. ಅಂತಹ ಸಾಧ್ಯತೆ ವಾರಣಾಸಿಯಲ್ಲಿ ಮರುಕಳಿಸಬಾರದೆಂದು ತಾನು ಕಣಕ್ಕೆ ಇಳಿದಿರುವುದಾಗಿ ಶ್ಯಾಮ್ ರಂಗೀಲಾ ಹೇಳಿದ್ದಾರೆ. ಶ್ಯಾಮ್ ರಂಗೀಲಾ ಪ್ರಧಾನಿ ನರೇಂದ್ರ ಮೋದಿಯವರ ಮಿಮಿಕ್ರಿಯನ್ನು ಮಾಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದಾರೆ.
ಮೂಲತ: ರಾಜಸ್ಥಾನದವರಾದ ಶ್ಯಾಮ್ ರಂಗೀಲಾ 2016 ರಿಂದ ಮೋದಿಯವರ ಧ್ವನಿಯನ್ನು ಅನುಕರಣೆ ಮಾಡಿ ವಿವಿಧ ಕಡೆ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಕಾರ್ಯಕ್ರಮದಲ್ಲಿಯೂ ಇವರು ಸ್ಪರ್ಧಿಯಾಗಿದ್ದರು. ಅಲ್ಲಿ ರಾಹುಲ್ ಗಾಂಧಿಯವರ ಮಿಮಿಕ್ರಿಯನ್ನು ಇವರು ಮಾಡಿದ್ದರು. ಅದರಲ್ಲಿ ವಿಶೇಷ ತೀರ್ಪುಗಾರರಾಗಿದ್ದ ನಟ ಅಕ್ಷಯ್ ಕುಮಾರ್ ಎದ್ದು ನಿಂತು ಶ್ಯಾಮ್ ರಂಗೀಲಾ ಅವರ ಪ್ರತಿಭೆಯನ್ನು ಹೊಗಳಿದ್ದರು. ಆದರೆ ಆ ಕ್ಲಿಪ್ ಪ್ರಸಾರವಾಗಲಿಲ್ಲ. ಮೋದಿ, ರಾಹುಲ್ ಸಹಿತ ರಾಜಕೀಯ ವ್ಯಕ್ತಿಗಳ ಮಿಮಿಕ್ರಿ ಮಾಡುವುದರಿಂದ ಚಾನಲ್ ಗಳಲ್ಲಿ ಅವಕಾಶ ಸಿಗುವುದು ದುಸ್ತರವಾಯಿತು ಎಂದು ಶ್ಯಾಮ್ ರಂಗೀಲಾ ಹೇಳುತ್ತಾರೆ. ಮೇ 14 ರಂದು ಬೆಳಿಗ್ಗೆ ನಾಮಪತ್ರ ಸಲ್ಲಿಸಲು ಬಂದಾಗ ಬ್ಯಾರಿಕೇಡ್ ಬಳಿ ತಡೆದ ಪೊಲೀಸರು ಅವರಿಗೆ 12 ಗಂಟೆಯ ನಂತರ ಬರಲು ತಿಳಿಸಿದ್ದನ್ನೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಶ್ಯಾಮ್ ರಂಗೀಲಾ ತನ್ನ ನಾಮಪತ್ರ ಸ್ವೀಕರಿಸುವಂತೆ ಅಧಿಕಾರಿಗಳಿಗೆ ಕರೆ ಮಾಡಿ ದಂಬಾಲು ಬಿದ್ದಿದ್ದರು. ಕೊನೆಗೂ ವಾರಣಾಸಿ ಜಿಲ್ಲಾಧಿಕಾರಿ ಶ್ಯಾಮ್ ರಂಗೀಲಾ ಅವರ ನಾಮಪತ್ರ ಸ್ವೀಕರಿಸಿದ್ದಾರೆ.
ಇದೇ ಕ್ಷೇತ್ರದಿಂದ ಮಾಜಿ ಬಿಜೆಪಿ ಶಾಸಕ, ಹಾಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ, ಬಹುಜನ್ ಸಮಾಜ ಪಾರ್ಟಿಯಿಂದ ಅಥರ್ ಜಮಾಲ್ ಲಾರಿ ಸಹಿತ 12 ಜನ ನಾಮಪತ್ರ ಸಲ್ಲಿಸಿದ್ದಾರೆ.
Leave A Reply