ತೆಂಡೂಲ್ಕರ್ ಭದ್ರತಾ ಸಿಬ್ಬಂದಿ ಆತ್ಮಹತ್ಯೆ!
ಭಾರತ ರತ್ನ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡ್ಕೂಲರ್ ಅವರ ಭದ್ರತಾ ಸಿಬ್ಬಂದಿಯಾಗಿ ನಿಯುಕ್ತಿಗೊಂಡಿದ್ದ ಯೋಧ ತನ್ನ ಕುತ್ತಿಗೆಗೆ ಗುಂಡು ಹೊಡೆದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ವೃದ್ಧ ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಅನಾಥರನ್ನಾಗಿಸಿದ ಪ್ರಕಾಶ್ ಕಪಡೆ ಹೀಗೆಕೆ ಮಾಡಿದರು ಎನ್ನುವುದು ಇನ್ನು ವಿಚಾರಣೆಯಿಂದ ತಿಳಿಯಬೇಕಾಗಿದೆ.
ರಾಜ್ಯ ಮೀಸಲು ಪೊಲೀಸ್ ಪಡೆಯ ಜವಾನ್ ಆಗಿದ್ದ ಪ್ರಕಾಶ್ ಕಪಡೆ ಕೇವಲ 39 ವರ್ಷ ವಯಸ್ಸು. ಕಿರು ರಜೆಯನ್ನು ಕಳೆಯಲು ತನ್ನ ಹಿರಿಯರ ಹುಟ್ಟೂರಾದ ಜಮ್ನೇರ್ ಎನ್ನುವ ಊರಿಗೆ ತೆರಳಿದ್ದರು.
ಅಲ್ಲಿ ಬುಧವಾರ ರಾತ್ರಿ ಸುಮಾರು ಒಂದೂವರೆ ಗಂಟೆಯ ಹೊತ್ತಿಗೆ ಕುತ್ತಿಗೆಗೆ ತನ್ನ ಸರ್ವಿಸ್ ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ಸದ್ಯಕ್ಕೆ ಪತ್ತೆಯಾಗಿಲ್ಲ. ಪ್ರಕಾಶ್ ಅವರ ಸಾವಿನ ತನಿಖೆಗೆ ಇಳಿದಿರುವ ಪೊಲೀಸ್ ಇಲಾಖೆ ಪತ್ನಿ, ಮಕ್ಕಳು, ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರನ್ನು ವಿಚಾರಣೆ ನಡೆಸುತ್ತಿದೆ. ಇನ್ನು ವಿವಿಐಪಿ ಭದ್ರತಾ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಇದನ್ನು ಎಸ್ ಆರ್ ಪಿ ಎಫ್ ಕೂಡ ಗಂಭೀರವಾಗಿ ತೆಗೆದುಕೊಂಡಿದೆ. ಸ್ವತಂತ್ರ ತನಿಖೆ ಆ ಸಂಸ್ಥೆಯಿಂದಲೂ ನಡೆಯುತ್ತಿದೆ.
ಸದ್ಯ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಇಂತಹ ವಿಷಯಗಳನ್ನು ಭದ್ರತಾ ಇಲಾಖೆಗಳು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಯಾಕೆಂದರೆ ಯಾವುದಾದರೂ ಬೇಸರ, ದು:ಖದಿಂದ ಇರುವಂತಹ ವ್ಯಕ್ತಿಗಳು ಯಾವ ಸಂದರ್ಭದಲ್ಲಿ ಏನು ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.
Leave A Reply