ಜೈಲಿನೊಳಗೆ ಮುಂಬೈ ಸರಣಿ ಸ್ಫೋಟದ ಆರೋಪಿ ಖಾನ್ ಫಿನಿಶ್!
1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿಯಾಗಿ ಕೊಲ್ಲಾಪುರದ ಕಲಂಬಾ ಸೆಂಟ್ರಲ್ ಜೈಲಿನಲ್ಲಿದ್ದ ಮುನ್ನಾ ಅಲಿಯಾಸ್ ಮೊಹಮ್ಮದ್ ಆಲಿ ಖಾನ್ ಆಲಿಯಾಸ್ ಮನೋಜ್ ಕುಮಾರ್ ಭವರಲಾಲ್ ಗುಪ್ತನನ್ನು ಸಹಕೈದಿಗಳು ಮುಗಿಸಿಬಿಟ್ಟಿದ್ದಾರೆ. ಆತನಿಗೆ 59 ವರ್ಷ ವಯಸ್ಸಾಗಿತ್ತು. ಪೊಲೀಸರ ಮಾಹಿತಿ ಪ್ರಕಾರ ಜೈಲಿನಲ್ಲಿ ಬಾತ್ ರೂಂ ಒಳಗೆ ಸ್ನಾನ ಮಾಡುವ ವಿಚಾರದಲ್ಲಿ ಗಲಾಟೆ ನಡೆದಿದೆ. ಗಲಾಟೆ ತಾರಕಕ್ಕೆ ಹೋಗಿ ಸಹಕೈದಿಗಳು ಮಹಮ್ಮದ್ ಆಲಿಖಾನ್ ನನ್ನು ಕೊಂದುಬಿಟ್ಟಿದ್ದಾರೆ.
ಸರಣಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಖಾನ್ ನನ್ನು ಕೆಲವು ವಿಚಾರಣಾಧೀನ ಕೈದಿಗಳು ಜೈಲಿನ ಡ್ರೈನೇಜ್ ನ ಕಬ್ಬಿಣದ ಪೈಪ್ ಗೆ ತಲೆಯನ್ನು ಹೊಡೆದಿದ್ದು, ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದ. ಕೂಡಲೇ ಜೈಲಿನ ಸಿಬ್ಬಂದಿಗಳು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಆತನನ್ನು ಆಸ್ಪತ್ರೆಗೆ ಕರೆತರುವ ಮುನ್ನವೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸಹಕೈದಿಗಳಾದ ಸೌರಭ್ ವಿಕಾಸ್, ರಿತುರಾಜ್ ವಿನಾಯಕ್ ಇನಾಂದಾರ್, ಸಂದೀಪ್ ಶಂಕರ್ ಚವಾಣ್, ದೀಪಕ್ ನೇತಾಜಿ ಖೋಟ್, ಸುರೇಶ್ ಪಾಟೀಲ್, ಪ್ರತೀಕ್ ಆಲಿಯಾಸ್ ಪಿಲ್ಯಾ ಎಲ್ಲಾ ಸೇರಿ ಖಾನ್ ಮೇಲೆ ದಾಳಿ ನಡೆಸಿ ಹತ್ಯೆಗೈದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಐದು ಜನ ಆರೋಪಿಗಳ ಮೇಲೂ ಕೊಲೆ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿರುವುದಾಗಿ ಕೊಲ್ಹಾಪುರ ಪೊಲೀಸರು ತಿಳಿಸಿದ್ದಾರೆ. 1993 ಮಾರ್ಚ್ 12 ರಂದು ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 257 ಮಂದಿ ಸಾವನ್ನಪ್ಪಿದ್ದರು.
Leave A Reply