ಚಂದನ್ – ನಿವೇದಿತಾ ಯಾಕೆ ಹೀಗೆ ಮಾಡಿಕೊಂಡ್ರು!
ಇಂತಹ ಒಂದು ಸಾಧ್ಯತೆಯನ್ನು ಕನ್ನಡ ಚಿತ್ರರಂಗ ಊಹಿಸಿರಲಿಲ್ಲ. ಯಾಕೆಂದರೆ ಅವರ ಬಾಳಿನಲ್ಲಿ ವಿಚ್ಚೇದನ ಎನ್ನುವ ಶಬ್ದಕ್ಕೆ ಜಾಗವೇ ಇಲ್ಲ ಎನ್ನುವಷ್ಟು ಅವರು ಸಂತೋಷದಿಂದ ಬಾಳುತ್ತಿದ್ದರು. ಆದರೆ ಜೀವನ ಎನ್ನುವುದು ಕೇವಲ ಒಂದು ಶಬ್ದ ಅಲ್ಲ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತು. ಅದರಲ್ಲಿ ಪ್ರೀತಿ, ವಿಶ್ವಾಸ, ಪ್ರಣಯ, ಕೋಪ, ದು:ಖ, ಸಂಭ್ರಮ ಎಲ್ಲವೂ ಇದೆ. ಆದ್ದರಿಂದ ವಾರದ ಹಿಂದೆ ನಾವೇ ರಾಜ ರಾಣಿ ಎನ್ನುತ್ತಿದ್ದವರು ಕೆಲವೇ ದಿನಗಳ ಬಳಿಕ ನಾನೊಂದು ತೀರ, ನೀನೊಂದು ತೀರ ಎನ್ನುತ್ತಿದ್ದಾರೆ. ಹಾಗೆ ಹೇಳುತ್ತಿರುವವರು ಬೇರೆ ಯಾರೂ ಅಲ್ಲ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ.
ಕರ್ನಾಟಕದ ಮೋಸ್ಟ್ ಸೆನ್ಸೇಶನಲ್ ಕಪಲ್ ಎಂದೇ ಪರಿಗಣಿತವಾಗಿರುವ ಚಂದನ್ ಹಾಗೂ ನಿವೇದಿತಾ ಮದುವೆಯಾಗಿ ಇನ್ನೂ ನಾಲ್ಕುವರೆ ವರ್ಷವೂ ಆಗಿಲ್ಲ. ಮೈಸೂರಿನಲ್ಲಿ ದಸರಾದ ಭವ್ಯ ವೇದಿಕೆಯಲ್ಲಿ ಬಹಿರಂಗವಾಗಿ ಚಂದನ್ ಶೆಟ್ಟಿಯವರು ನಿವೇದಿತಾ ಅವರಿಗೆ ಪ್ರಪೋಸ್ ಮಾಡಿದ್ದರು. ಈ ಜೋಡಿ ಅದರ ಮೊದಲು ಬಿಗ್ ಬಾಸ್ ನಲ್ಲಿ ಒಟ್ಟಿಗೆ ದಿನಗಳನ್ನು ಕಳೆದಿತ್ತು. ಚಂದನ್ ಹಾಗೂ ನಿವೇದಿತಾ ಅವರು ಮನೆಯವರ ಒಪ್ಪಿಗೆಯನ್ನು ಪಡೆದು 2020 ಫೆಬ್ರವರಿಯಲ್ಲಿ ಅದ್ದೂರಿಯಾಗಿ ಮದುವೆ ಕೂಡ ಆಗಿದ್ದರು. ಚಂದನ್ ಕನ್ನಡದ ಪ್ರಸಿದ್ಧ ರ್ಯಾಪರ್, ಸಿಂಗರ್, ಸಂಗೀತ ನಿರ್ದೇಶಕ ಸಹಿತ ವಿವಿಧ ಪ್ರತಿಭೆಗಳನ್ನು ಮೈಗೂಡಿಸಿಕೊಂಡು ಬೆಳೆದಿರುವ ಕಲಾವಿದ. ನಿವೇದಿತಾ ಗೌಡ ಕೂಡ ರೀಲ್ಸ್ ಮೂಲಕ ಮನೆಮನೆಗಳಿಗೂ ಪರಿಚಿತವಾಗಿರುವಂತಹ ಸೆಲೆಬ್ರೆಟಿ. ಹೀಗೆ ಚಂದನ್ ಮತ್ತು ನಿವೇದಿತಾ ಒಟ್ಟಾಗಿ ಆಲ್ಬಂಗಳಲ್ಲಿಯೂ ಕಾಣಿಸಿಕೊಂಡಿದ್ದರು. ಹೀಗೆ ಸಾಗುತ್ತಿದ್ದ ಸುಂದರ ಜೋಡಿ ಹಠಾತ್ತನೇ ಬೆಂಗಳೂರಿನ ಶಾಂತಿನಗರದ ಫ್ಯಾಮಿಲಿ ಕೋರ್ಟಿನಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿತ್ತು. ಕೆಲವು ವೈಯಕ್ತಿಕ ಕಾರಣಗಳಿಂದ ಒಟ್ಟಿಗೆ ಇರಲು ಈ ಜೋಡಿ ಬಯಸುತ್ತಿಲ್ಲ. ಪರಸ್ಪರ ಒಪ್ಪಂದದ ಮೇರೆಗೆ ವಿಚ್ಚೇದನದ ಪ್ರಕ್ರಿಯೆ ಬಹಳ ದೀರ್ಘ ಕಾಲ ನಡೆಯದೇ ಕೋರ್ಟ್ ಡೈವೋಸ್ ಮಂಜೂರು ಮಾಡಿದೆ.
ಚಂದನ್ ಹಾಗೂ ನಿವೇದಿತಾ ಅವರ ವಿಚ್ಚೇದನದ ಅರ್ಜಿ ಜೂನ್ 7 ರಂದು ಕೌಟುಂಬಿಕ ನ್ಯಾಯಾಲಯದ ಮುಂದೆ ಬಂದಿತ್ತು. ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್.ಜ್ಯೋತಿಶ್ರೀ ಅದನ್ನು ವಿಚಾರಣೆಗೆ ಕೈಗೆತ್ತಿಕೊಂಡರು. ಅರ್ಜಿಯನ್ನು ವಿಚಾರಣೆ ಮಾಡುವ ಮೊದಲು ಕಾನೂನು ಪ್ರಕ್ರಿಯೆಯಂತೆ ಮಿಡಿಯೇಶನ್ ಪ್ರಕ್ರಿಯೆ ಒಳಪಡಬೇಕು. ಅದರಂತೆ ಚಂದನ್ ಹಾಗೂ ನಿವೇದಿತಾ ಅವರಿಗೆ ಕೌಟುಂಬಿಕ ನ್ಯಾಯಾಲಯದ ಮಿಡಿಯೇಶನ್ ಸೆಂಟರ್ ನಲ್ಲಿ ಮಾತುಕತೆ ನಡೆಸಲಾಯಿತು. ವಿಚ್ಚೇದನದ ಮೊದಲು ಈ ಸಂಧಾನ ನಡೆಯಲೇಬೇಕಿದ್ದ ಕಾರಣ ಸಂಧಾನಕಾರರು ಇಬ್ಬರನ್ನು ಕೂರಿಸಿ ಮಾತುಕತೆ ನಡೆಸಿದಾಗ ಇಬ್ಬರೂ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಹೀಗಾಗಿ ಅಂತಿಮವಾಗಿ ಕೋರ್ಟ್ ವಿಚ್ಚೇದನ ನೀಡಿ ಆದೇಶಿಸಿದೆ.
ಸಾಮಾನ್ಯವಾಗಿ ವಿಚ್ಚೇದನ ಎಂದರೆ ಅದು ತಿಂಗಳುಗಳಿಂದ ಹಿಡಿದು ವರ್ಷಗಟ್ಟಲೆ ನ್ಯಾಯಾಲಯದಿಂದ ಎಳೆಯಲ್ಪಡುತ್ತದೆ. ಆದ್ರೆ ಈ ದಂಪತಿಯ ವಿಚ್ಚೇದನ ಮಾತ್ರ ಒಂದೇ ದಿನ ಆಗಿದೆ. ಅದಕ್ಕೆ ಮುಖ್ಯ ಕಾರಣ ಇಬ್ಬರೂ ಪರಸ್ಪರ ಸಮ್ಮತಿಸಿ, ಒಟ್ಟಿಗೆ ಬಂದು, ನಗುನಗುತ್ತಲೇ, ಅಕ್ಕಪಕ್ಕದಲ್ಲಿ ಕುಳಿತು ಎಲ್ಲಾ ಪ್ರಕ್ರಿಯೆ ಮುಗಿಸಿ ಡೈವೋರ್ಸ್ ಪಡೆಯಲು ಮುಂದಾಗಿರುವುದರಿಂದ ನ್ಯಾಯಾಲಯ ಕೂಡ ವಿಚ್ಚೇದನ ನೀಡಿದೆ ಎನ್ನಲಾಗುತ್ತಿದೆ.
ಈ ದೊಡ್ಡ ನಿರ್ದಾರದ ಹಿಂದೆ ಕಾರಣಗಳು ಏನಿರಬಹುದು ಎನ್ನುವುದರ ಬಗ್ಗೆ ಅವರ ಅಭಿಮಾನಿಗಳಲ್ಲಿ ಕುತೂಹಲ ಇದೆ. ಎಲ್ಲರೂ ತಮ್ಮದೇ ಮೂಗಿನ ನೇರಕ್ಕೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಿವೇದಿತಾ ತುಂಡುಡುಗೆ ಧರಿಸಿ ವಿಪರೀತ ರೀಲ್ಸ್ ಮಾಡುತ್ತಿದ್ದದ್ದಕ್ಕೆ ಚಂದನ್ ಆಕ್ಷೇಪಿಸಿದ್ರಾ ಎನ್ನುವುದು ಕೂಡ ಈ ವದಂತಿಗಳಿಗೆ ಒಂದು. ಆದರೆ ಸದ್ಯ ಈ ಜೋಡಿ ತಮ್ಮ ವಿಚ್ಚೇದನದ ಕಾರಣವನ್ನು ಸ್ಪಷ್ಟಪಡಿಸಿಲ್ಲ.
Leave A Reply