ಇನ್ನು ದರ್ಶನ್ ಮನೆಗೂ ಸಂಚಕಾರ!
ದರ್ಶನ್ ಕೊಲೆ ಕೇಸಿನಲ್ಲಿ ಸಿಲುಕಿ ವಿಚಾರಣೆಯನ್ನು ಎದುರಿಸುತ್ತಿರುವಾಗಲೇ ಇತ್ತ ಅವರ ನಿವಾಸಕ್ಕೂ ಸಂಚಕಾರ ಬರುವಂತೆ ಕಾಣುತ್ತಿದೆ. ನಟ ದರ್ಶನ್ ಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಭವ್ಯ ಬಂಗ್ಲೆ ಇದೆ. ಅದಕ್ಕೆ ತೂಗುದೀಪ ನಿವಾಸ ಎಂದು ಹೆಸರು ಇಡಲಾಗಿದೆ. ಅದನ್ನು ರಾಜಕಾಲುವೆಯ ಮೇಲೆ ನಿರ್ಮಾಣವಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೆರವುಗೊಳಿಸಲು ಮುಂದಾಗಿತ್ತು. ಆ ಮನೆ ಮಾತ್ರವಲ್ಲ, ಆ ಪ್ರದೇಶದಲ್ಲಿರುವ ಹಲವು ಮನೆಗಳನ್ನು ತೆರವುಗೊಳಿಸಲು ಬಿಬಿಎಂಪಿ ಮುಂದಾಗಿತ್ತು. ಆದರೆ ದರ್ಶನ ಸೇರಿದಂತೆ ರಾಜಕಾಲುವೆಯ ಮನೆ ಕಟ್ಟಿರುವ ಅನೇಕರು ನ್ಯಾಯಾಲಯದಿಂದ ಸ್ಟೇ ತಂದಿದ್ದರು.
ಈಗ ಬಿಬಿಎಂಪಿ ಮತ್ತೊಮ್ಮೆ ರಾಜಕಾಲುವೆಯ ಒತ್ತುವರಿಯನ್ನು ತೆರವುಗೊಳಿಸಲು ಕಾರ್ಯರೂಪಕ್ಕೆ ಇಳಿದಿದೆ. ಈ ಬಗ್ಗೆ ಮಾಧ್ಯಮದವರು ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಕೇಳಿದಾಗ ” ಯಾರೇ ಸ್ಟೇ ತಂದಿದ್ದರೂ ಕಾನೂನು ಪ್ರಕಾರ ಕ್ರಮವಹಿಸಿ ತೆರವು ಮಾಡುತ್ತೇವೆ. ನೀ ಸ್ಟೇ ತಂದಿದ್ರು ತೆರವು ಮಾಡುತ್ತೇವೆ, ನಾನು ಸ್ಟೇ ತಂದಿದ್ರು ತೆರವು ಮಾಡುತ್ತೇವೆ ” ಎಂದು ಹೇಳಿದರು.
ಈ ವಿಷಯದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಪ್ರತಿಕ್ರಿಯಿಸಿ ” ಸಣ್ಣವರು, ದೊಡ್ಡವರು ಅಂತಾ ನೋಡಲ್ಲ, ತೆರವು ಮಾಡುತ್ತೇವೆ. ಸ್ಟೇ ಇತ್ತು. ನಾವು ವೆಕೆಟ್ ಮಾಡಿರಲಿಲ್ಲ. ಸ್ಟೇ ತೆರವು ಮಾಡಿ ಕಾರ್ಯಾಚರಣೆ ಮಾಡುತ್ತೇವೆ. ಎಷ್ಟು ಸ್ಟೇ ತೆರವು ಆಗುತ್ತೋ ನೋಡುತ್ತೇವೆ. ಎಲ್ಲೆಲ್ಲಿ ಸ್ಟೇ ಇರುವ ಪ್ರಕರಣಗಳು ಇವೆ. ಅಲ್ಲೆಲ್ಲಾ ತೆರವು ಕಾರ್ಯ ಮಾಡುತ್ತೇವೆ. ಎಷ್ಟು ಬೇಗ ಕೋರ್ಟ್ ನಲ್ಲಿ ಸ್ಟೇ ತೆರವಾಗುತ್ತೆ, ನೋಡುತ್ತೇವೆ, ನಂತರ ಕ್ರಮ ವಹಿಸುತ್ತೇವೆ ” ಎಂದು ಹೇಳಿದ್ದಾರೆ.
Leave A Reply