ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್ ಗೆ ಹಠಾತ್ ಕಿವುಡತನ! ಇನ್ ಸ್ಟಾದಲ್ಲಿ ಹೇಳಿಕೆ
			    	    ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್ ಯಾರೆಂದು ಗೊತ್ತಿಲ್ಲದ ಸಂಗೀತ ಪ್ರೇಮಿಗಳು ಇಲ್ಲ. ಅವರು ರಾಷ್ಟ್ರೀಯ ವಾಹಿನಿಗಳ ಸಂಗೀತ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಕೂಡ ಜನಮನ ಗೆದ್ದವರು. ಅವರಿಗೆ ಈಗ ಅಚಾನಕ್ ಆಗಿ ಕಿವುಡುತನ ಬಂದಿರುವುದು ನಿಜಕ್ಕೂ ಅವರ ಅಭಿಮಾನಿಗಳಿಗೆ ತುಂಬಾ ನೋವನ್ನು ತಂದಿದೆ. ಈ ಬಗ್ಗೆ ಅವರೇ ಇನ್ಸಸ್ಟಾಗ್ರಾಂನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

” ಕೆಲವು ವಾರಗಳ ಹಿಂದೆ ವಿಮಾನದಿಂದ ಇಳಿದು ಬರುವಾಗ ಏನು ಕೇಳಿಸದಂತ ಅನುಭವವಾಯಿತು. ವೈದ್ಯರ ಬಳಿ ತಪಾಸಣೆ ಮಾಡಿಸಿದಾಗ ವೈರಾಣು ಸೋಂಕಿನಿಂದ ಕಿವಿಯಲ್ಲಿರುವ ನರಕೋಶಗಳಿಗೆ ಆಗಿರುವ ತೊಂದರೆಯಿಂದಾಗಿ ಇದ್ದಕ್ಕಿದ್ದಂತೆ ಕಿವುಡತನ ಕಾಣಿಸಿಕೊಂಡಿದೆ ಎಂದರು ” ಎಂದು ಅಲ್ಕಾ ತಿಳಿಸಿದ್ದಾರೆ.

” ಆದಷ್ಟು ಹೆಡ್ ಫೋನ್ ಬಳಕೆ ಮತ್ತು ಜೋರಾದ ಶಬ್ದಗಳಿಂದ ದೂರವಿರಿ ಎಂದು ನನ್ನ ಅಭಿಮಾನಿಗಳು ಮತ್ತು ಯುವಜನರನ್ನು ಕೇಳಿಕೊಳ್ಳುತ್ತೇನೆ. ನನ್ನ ವೃತ್ತಿ ಜೀವನದಲ್ಲಾದ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಮುಂದೊಂದು ದಿನ ವಿವರಿಸುತ್ತೇನೆ. ಈ ಕಷ್ಟದ ಸಮಯದಲ್ಲಿ ನಿಮ್ಮೆಲ್ಲರ ಪ್ರೋತ್ಸಾಹ, ಆರ್ಶೀವಾದವಿರಲಿ. ಆದಷ್ಟು ಬೇಗ ಚೇತರಿಸಿಕೊಳ್ಳುತ್ತೇನೆ ” ಎಂದು ಬರೆದುಕೊಂಡಿದ್ದಾರೆ.
58 ವರ್ಷದ ಅಲ್ಕಾ ಅವರು ಈವರೆಗೆ 1114 ಸಿನೆಮಾಗಳಿಗೆ ಸುಮಾರು 2486 ಹಾಡುಗಳನ್ನು ಹಾಡಿದ್ದಾರೆ. ಈ ಮೂಲಕ ಬಾಲಿವುಡ್ ನಲ್ಲಿ ಅತೀ ಹೆಚ್ಚು ಹಾಡುಗಳನ್ನು ಹಾಡಿದ ಗಾಯಕರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
		    				        
								    
								    








