ಆನೆಯನ್ನು ಪಡೆದುಕೊಳ್ಳುವುದಕ್ಕಿಂತ ಸಾಕುವುದು ಕಷ್ಟ!
ಇತ್ತೀಚೆಗಷ್ಟೇ ತಾನು ಪ್ರೀತಿಸಿದ ಹುಡುಗಿ ನನ್ನನ್ನು ಈಗ ಪ್ರೀತಿಸುವುದಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಹಾಡು ಹಗಲೇ ಅವಳನ್ನು ಕೊಚ್ಚಿ ಕೊಚ್ಚಿ ಕೊಂದದ್ದನ್ನು ನಾವು ಕಂಡಿದ್ದೇವೆ. ತಾನು ಪ್ರೀತಿಸಿದ ಹುಡುಗಿ ಈಗ ತನ್ನನ್ನು ದೂರ ಇಡುತ್ತಿದ್ದಾಳೆ ಎನ್ನುವ ಕಾರಣಕ್ಕಾಗಿ ಆ ಹುಡುಗಿಯೊಂದಿಗೆ ಅವಳ ತಂಗಿಯನ್ನು ಅವಳ ತಾಯಿಯನ್ನು ಕೂಡ ಕೊಂದ ಘಟನೆ ಉಡುಪಿಯಲ್ಲಿ ಕೂಡ ನಡೆದಿತ್ತು. ಇಷ್ಟೇ ಅಲ್ಲದೆ ತಾನು ಪ್ರೀತಿಸಿದವಳನ್ನು ಮತ್ತೊಬ್ಬ ಪ್ರೀತಿಸಲು ತೊಡಗಿದ್ದಾನೆ ಎನ್ನುವ ಕಾರಣಕ್ಕಾಗಿ ಆತ ತನ್ನ ಗೆಳೆಯ ಎನ್ನುವುದನ್ನು ಕೂಡ ಮರೆತು ಆತನನ್ನು ಕೊಂದ ಘಟನೆ ದೂರದ ಮಧ್ಯಪ್ರದೇಶದಲ್ಲಿ ಈ ಎರಡು ದಿನದ ಹಿಂದೆಯಷ್ಟೇ ನಡೆದಿತ್ತು. ಈ ವಿಚಾರದಲ್ಲಿ ಹೆಣ್ಣು ಮಕ್ಕಳು ಕೂಡ ಕಡಿಮೆ ಏನಿಲ್ಲ. ಪ್ರಿಯಕರನಿಗಾಗಿ ತನ್ನ ಗಂಡನನ್ನೇ ಕೂಡ ಕೊಂದ ಅದೆಷ್ಟು ಘಟನೆಗಳು ನಡೆದಿದೆ.ಇಲ್ಲೆಲ್ಲವೂ ಕೂಡ ಪ್ರೀತಿ ಪ್ರೇಮವೇ ಕಾರಣ.
ಒಬ್ಬ ಗಂಡು ಮತ್ತೊಬ್ಬ ಗಂಡನ್ನು ಪ್ರೀತಿಸಿವುದು ಸ್ನೇಹದ ಮೊದಲ ಮೆಟ್ಟಿಲು. ಈ ಸ್ನೇಹದಲ್ಲಿರುವ ಭಾವನೆಗಿಂತ ನೂರರಷ್ಟು ಮಿಗಿಲಾಗಿ ಮತ್ತೊಂದು ಹೆಣ್ಣನ್ನು ಪ್ರೀತಿಸಿದಾಗ ಬರುವುದು ಸಾಮಾನ್ಯ ಸಂಗತಿ. ಅದರಲ್ಲೂ ಹೆಣ್ಣಿನ ತೆಕ್ಕೆಗೆ ಬಿದ್ದ ಗಂಡು ತನಗರಿವಿಲ್ಲದಂತೆ ತನ್ನೆಲ್ಲವನ್ನು ಅವಳಲ್ಲಿ ಸಮರ್ಪಿಸಿಕೊಳ್ಳುತ್ತಾನೆ. ಹೆಣ್ಣು ಕೂಡ ಇದಕ್ಕೆ ಹೊರತಾಗಿಲ್ಲ. ಸ್ನೇಹ ಅಥವಾ ಪ್ರೀತಿ ಮನಸ್ಸಿನಿಂದ ದೇಹಕ್ಕೆ ಪರಿವರ್ತಿತವಾದಾಗ ಅದು ಮತ್ತಷ್ಟು ಗಾಢವಾಗುತ್ತದೆ. ಕೆಲವೊಮ್ಮೆ ಇದಕ್ಕೆ ಪ್ರಾಯ ಹಾಗೂ ಸಂಸಾರದ ಯೋಚನೆಯನ್ನು ಮರೆತು ಬಿಡುವಷ್ಟರ ಮಟ್ಟಿಗೆ ಅದು ನಮ್ಮನ್ನು ತಂದು ನಿಲ್ಲಿಸುತ್ತದೆ. ಪ್ರಜ್ಞಾವಂತರಾದಲ್ಲಿ ಈ ವಾತಾವರಣದಿಂದ ಹೊರಬರಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಇದರೊಳಗೆ ಸಿಲುಕಿ ನಮ್ಮನ್ನು ನಾವು ಬಲಿ ಕಳೆದುಕೊಳ್ಳಬೇಕಾಗುತ್ತದೆ.
ಇದಕ್ಕೆ ಬೇಕಾದಷ್ಟು ಸಾಕ್ಷಿಗಳಿದ್ದರೂ ಕೂಡ ದರ್ಶನ್ ಪ್ರಕರಣ ಕೂಡ ಒಂದು ಸಾಕ್ಷಿ ಅಷ್ಟೇ. ಮೊದಲೇ ಹೆಂಡತಿಯೊಂದಿಗೆ ವೈಮನಸ್ಯವಿತ್ತು.ಆಗ ಮನಸ್ಸು ಮತ್ತೊಂದು ಹೆಣ್ಣಿಗಾಗಿ ಹಾತೊರೆಯುವುದು ಸಾಮಾನ್ಯ. ಸಮಾಜದಲ್ಲಿ ಗುರುತಿಸಲ್ಪಡುವ ವ್ಯಕ್ತಿಯಾದ್ದರಿಂದ ಅನಿವಾರ್ಯವಾಗಿಯಾದರೂ ಇದನ್ನು ದಾಟಿ ನಿಲ್ಲಬೇಕಿತ್ತು. ತನ್ನ ಪ್ರೇಯಸಿಗೆ ಇಷ್ಟವಾಗದ ವಿಚಾರಕ್ಕೆ ಪ್ರತಿರೋಧವನ್ನು ಮಾಡುವಾಗ ಕಾನೂನನ್ನು ಕೈಗೆತ್ತಿಕೊಳ್ಳುವುದು ಮೂರ್ಖತನ ಎನ್ನುವುದು ಈಗ ಅವರಿಗೂ ಕೂಡ ಅನಿಸಿರಬಹುದು. ಸಾಮಾನ್ಯ ವ್ಯಕ್ತಿ ಕೂಡ ಈ ರೀತಿಯಾಗಿ ಮಾಡಬಾರದು ಎನ್ನುವಾಗ ದರ್ಶನ್ ನಂತಹ ಸಮರ್ಥ ವ್ಯಕ್ತಿಯಿಂದ ಇಂತಹ ವಿಚಾರವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಸಣ್ಣ ಕಾಲ್ ಸಾಕಿತ್ತು ಆತನನ್ನು ಕಂಬಿ ಎಣಿಸುವಂತೆ ಮಾಡಬಹುದಿತ್ತು. ಆದರೆ ಹೆಣ್ಣಿನ ಅಮಲಿನೊಂದಿಗೆ ಎಣ್ಣೆಯ ಅಮಲು ಸೇರಿದಾಗ ಮನುಷ್ಯ ತನ್ನ ಕೈ ಮೀರಿ ನಡೆಯುತ್ತಾನೆ.
ಹೆಸರು ಗಳಿಸುವುದು ಇವತ್ತಿನ ಕಾಲದಲ್ಲಿ ಕಷ್ಟವಲ್ಲ. ಆದರೆ ಅದನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ. ಆನೆಯನ್ನು ಪಡೆದುಕೊಳ್ಳುವುದಕ್ಕಿಂತ ಸಾಕುವುದು ಕಷ್ಟ. ಅದೇ ರೀತಿಯಾಗಿ ಒಂದು ಸಣ್ಣ ಪಾತ್ರದಿಂದ ಬೆಳ್ಳಿ ಪರದೆಗೆ ಕಾಲಿಟ್ಟ ದರ್ಶನ್, ಮತ್ತೆ ತಿರುಗಿ ನೋಡದೆ ಆನೆ ನಡೆದ ದಾರಿಯಂತೆ ನಡೆದು ಬಂದಿದ್ದ. ಆದರೆ ಈ ಒಂದು ಘಟನೆ ಈತನ ಇವತ್ತಿನ ತನಕದ ಎಲ್ಲಾ ಅನಾಚಾರಗಳನ್ನು ಮೀರಿತು. ಎಲ್ಲವನ್ನು ತೋರಿಸುವ ಹಾಗೆ ಆಗಿ ಹೋಯಿತು. ಇದಕ್ಕೆ ಒಂದು ಹೆಣ್ಣು ಕಾರಣವಾಯಿತು. ಪ್ರೀತಿಸುವುದು ತಪ್ಪಲ್ಲ ಆದರೆ ಪ್ರೀತಿಸುವಾಗ ನಾವು ಯಾರು ನಾವೆಲ್ಲಿದ್ದೇವೆ ಎನ್ನುವುದನ್ನು ಮರೆಯಬಾರದು. ಅಷ್ಟೇ ಅಲ್ಲದೆ ಪ್ರೀತಿಸಿದ್ದು ಸಿಗದಿದ್ದಕ್ಕೆ ನಮ್ಮನ್ನು ನಾವು ಕಳೆದುಕೊಳ್ಳಬಾರದು.
ಚಿತ್ರರಂಗಕ್ಕೆ ಕಾಲಿಟ್ಟು ಅಲ್ಲಿಂದ ರಾಜಕೀಯಕ್ಕೆ ಇಳಿದು ಉಪ ಮುಖ್ಯಮಂತ್ರಿಯಾಗಿ ಮತ್ತಷ್ಟು ಸಮಾಜಮುಖಿಯಾದ ಚಿಂತನೆಯನ್ನು ಕೊಟ್ಟಿರುವ ಪವನ್ ಕಲ್ಯಾಣ್ ಒಂದು ಕಡೆ ಇರುವಾಗ ಇತ್ತ ನಮ್ಮ ಕರ್ನಾಟಕದಲ್ಲಿ ನಮ್ಮ ದರ್ಶನ್ ಅದೇ ಚಿತ್ರರಂಗದಿಂದ ಜೈಲು ಸೇರುತ್ತಿರುವುದು ಬಹಳ ಬೇಸರದ ಸಂಗತಿ.
Leave A Reply