ಈ ರಾಜ್ಯದಲ್ಲಿ 800 ವಿದ್ಯಾರ್ಥಿಗಳಿಗೆ ಏಡ್ಸ್! ಸಂಪೂರ್ಣ ವರದಿ ಇಲ್ಲಿದೆ ನೋಡಿ…
ಭಾರತದ ತ್ರಿಪುರಾ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಆತಂಕಕಾರಿ ವಿಚಾರವೊಂದು ಬಯಲಿಗೆ ಬಂದಿದೆ. ಏಡ್ಸ್ ಈ ರಾಜ್ಯದ ವಿದ್ಯಾರ್ಥಿ ಸಮುದಾಯವನ್ನು ಬೆಂಬಿಡದೆ ಕಾಡಲು ಶುರು ಮಾಡಿದೆ. ತ್ರಿಪುರ ರಾಜ್ಯದ ಏಡ್ಸ್ ನಿಯಂತ್ರಣ ಸೊಸೈಟಿ ( ಟಿಎಸ್ ಎ ಸಿಎಸ್) ಇದರ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ವಿವಿಧ ವಯೋಮಾನದ ವಿದ್ಯಾರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ 828 ವಿದ್ಯಾರ್ಥಿಗಳಿಗೆ ಎಚ್ ಐವಿ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ಅದರಲ್ಲಿ 47 ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದು, 572 ವಿದ್ಯಾರ್ಥಿಗಳು ಆ ಕಾಯಿಲೆಯೊಂದಿಗೆ ಜೀವಿಸುತ್ತಿದ್ದಾರೆ. ಇನ್ನು ಭಯಾನಕ ವಿಚಾರ ಎಂದರೆ ಇದರಲ್ಲಿ ಹಲವಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ತ್ರಿಪುರಾದಿಂದ ಹೊರಗೆ ಬೇರೆ ಬೇರೆ ಕಡೆ ತೆರಳಿದ್ದಾರೆ.
ಸುಮಾರು 220 ಶಾಲೆಗಳು, 24 ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಈ ವೈದ್ಯಕೀಯ ಪರೀಕ್ಷೆಯಲ್ಲಿ ಒಳಗೊಂಡಿದ್ದವು. ಏಡ್ಸ್ ಬರಲು ಮುಖ್ಯ ಕಾರಣ ಏನೆಂದು ಪತ್ತೆಹಚ್ಚಿರುವ ಸಂಸ್ಥೆ ಇದಕ್ಕೆ ಚುಚ್ಚುಮದ್ದಿನ ರೂಪದಲ್ಲಿ ವಿದ್ಯಾರ್ಥಿಗಳು ತೆಗೆದುಕೊಳ್ಳುತ್ತಿರುವ ಡ್ರಗ್ಸ್ ಕಾರಣ ಎಂದು ಪತ್ತೆಹಚ್ಚಿದೆ. ಸುಮಾರು 164 ಆರೋಗ್ಯ ಕೇಂದ್ರಗಳಿಂದ ಡಾಟಾ ಸಂಗ್ರಹಿಸಿರುವ ಸರಕಾರಿ ಸಂಸ್ಥೆ ವರದಿಯನ್ನು ತಯಾರಿಸಿದೆ. ಬಹಳ ಸೂಕ್ಷ್ಮವಾಗಿ ಅಧ್ಯಯನ ಮಾಡಿದ ನಂತರ ನಾವು ಅಂತಿಮ ವರದಿಯನ್ನು ತಯಾರಿಸಿದ್ದೇವೆ ಟಿಎಸ್ ಎಸಿಎಸ್ ಇದರ ಜಂಟಿ ನಿರ್ದೇಶಕರು ಎಂದು ತಿಳಿಸಿದ್ದಾರೆ.
ಇದಕ್ಕೆ ಮುಖ್ಯ ಕಾರಣದ ಬಗ್ಗೆ ಮಾಹಿತಿ ನೀಡಿದ ಅವರು ಏಡ್ಸ್ ಗೆ ಬಲಿಯಾದ ಬಹುತೇಕ ಮಕ್ಕಳು ಅನುಕೂಲಸ್ಥ ಕುಟುಂಬದವರು. ಅನೇಕರ ಅಮ್ಮ, ಅಪ್ಪ ಇಬ್ಬರೂ ಸರಕಾರಿ ಸೇವೆಯಲ್ಲಿ ಇದ್ದು, ಅಂತವರ ಮಕ್ಕಳೇ ಇದಕ್ಕೆ ತುತ್ತಾಗಿದ್ದಾರೆ. ಇಂತಹ ಕುಟುಂಬಗಳಲ್ಲಿ ಪೋಷಕರು ಮಕ್ಕಳ ಬೇಡಿಕೆಯನ್ನು ತಕ್ಷಣ ಪೂರೈಸುವುದರಿಂದ ಮತ್ತು ಮಕ್ಕಳ ಚಲನವಲನಗಳನ್ನು ನಿತ್ಯ ಗಮನಿಸದೇ ಇರುವುದರಿಂದ ಮಕ್ಕಳು ಸುಲಭವಾಗಿ ದಾರಿ ತಪ್ಪುತ್ತಿದ್ದಾರೆ. ಹೆತ್ತವರಿಗೆ ಈ ವಿಷಯ ಗೊತ್ತಾಗುವಾಗ ತಡವಾಗಿರುತ್ತದೆ.
ಏಡ್ಸ್ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲದ ಮಕ್ಕಳು ಒಂದೇ ಸಿರಿಂಜಿನಿಂದ ಹಲವರು ಡ್ರಗ್ಸ್ ದೇಹಕ್ಕೆ ಚುಚ್ಚಿಕೊಳ್ಳುವುದರಿಂದ ಒಬ್ಬರಿಂದ ಒಬ್ಬರಿಗೆ ಏಡ್ಸ್ ಸುಲಭವಾಗಿ ಹರಡುತ್ತಿದೆ. ಇದರಿಂದ ಹೊಸ ಹೊಸ ಏಡ್ಸ್ ರೋಗಿಗಳು ಹುಟ್ಟಿಕೊಳ್ಳುತ್ತಿದ್ದಾರೆ.
ಹಲವು ಸಂದರ್ಭದಲ್ಲಿ ಹೊಸ ನೀಡಲ್ಸ್, ಸಿರಿಂಜ್ ಗಳು ಖರೀದಿಸಲು ತೊಡಕಾಗುವಾಗ ಅಥವಾ ಸಿಕ್ಕಿ ಬೀಳುವ ಆತಂಕದಲ್ಲಿ ಮಕ್ಕಳು ಒಂದೇ ಸಿರಿಂಜ್ ಬಳಸಿ ಡ್ರಗ್ಸ್ ಸೇವಿಸುತ್ತಾರೆ. ಇದರಿಂದ ವೈರಸ್ ಗಳಿಗೆ ಸುಲಭವಾಗಿ ಒಬ್ಬರಿಂದ ಇನ್ನೊಬ್ಬರ ದೇಹ ಪ್ರವೇಶಿಸಲು ಸುಲಭಸಾಧ್ಯವಾಗುತ್ತದೆ. ಸದ್ಯ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವ ತ್ರಿಪುರ ಸರಕಾರ ವಿವಿಧ ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ. ಅದರಲ್ಲಿ ಕೌನ್ಸಿಲಿಂಗ್, ಡ್ರಗ್ಸ್ ವಿರುದ್ಧ ಜಾಗೃತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದೆ.
Leave A Reply