ಕುತ್ತಾರು ಕೊರಗಜ್ಜ ಕಟ್ಟೆಗೆ ಕತ್ರಿನಾ, ರಾಹುಲ್ ಭೇಟಿ
ಉಳ್ಳಾಲದ ಕುತ್ತಾರು ಕೊರಗಜ್ಜ ದೈವದ ನಂಬಿಕೆ ದೇಶ, ವಿದೇಶಗಳಲ್ಲಿ ಇದೆ. ಅಸಂಖ್ಯಾತ ಭಕ್ತರು ಇಲ್ಲಿನ ಶಕ್ತಿಯನ್ನು ನಂಬಿಕೊಂಡು ಬರುತ್ತಾರೆ. ಎಂತಹುದೇ ವಿವಿಐಪಿ ಇದ್ದರೂ ಇಲ್ಲಿ ಬಂದಾಗ ಅವರು ಸಾಮಾನ್ಯ ಭಕ್ತ ಅಥವಾ ಭಕ್ತೆ ಅಷ್ಟೇ. ಇದಕ್ಕೆ ಮತ್ತೊಂದು ಉದಾಹರಣೆ ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್. ಅವರು ಭಾನುವಾರ ಕೊರಗಜ್ಜನ ಕಟ್ಟೆಗೆ ಭೇಟಿ ನೀಡಿದರು.
ಇದೇ ದಿನ ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್, ಅವರ ಪತ್ನಿ ಅಥಿಯಾ ಶೆಟ್ಟಿ, ಮಾವ ಸುನೀಲ್ ಶೆಟ್ಟಿ, ಭಾವ ಅಹಾನ್ ಶೆಟ್ಟಿ, ಮ್ಯಾಟ್ರಿಕ್ ಎಂಟರ್ ಟೈನ್ ಮೆಂಟ್ ನ ರೇಷ್ಮಾ ಶೆಟ್ಟಿ ಅವರು ಆಗಮಿಸಿ ಕೋಲದಲ್ಲಿ ಭಾಗಿಯಾಗಿದ್ದರು. ಕತ್ರಿನಾ ಕೈಫ್ ಪತಿ ವಿಕ್ಕಿ ಕೌಶಲ್ ಕೂಡ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರು ಬಂದಿರಲಿಲ್ಲ.
ಮಹಿಳೆಯರಿಗೆ ರಾತ್ರಿ ಹೊತ್ತು ಕಟ್ಟೆಯ ಒಳಗೆ ಪ್ರವೇಶ ಇಲ್ಲದ ಕಾರಣ ಕತ್ರಿನಾ, ಅಥಿಯಾ ಮತ್ತು ರೇಷ್ಮಾ ದೈವಸ್ಥಾನದ ಹೊರಗಡೆಯಿಂದ ಕೋಲವನ್ನು ವೀಕ್ಷಿಸಿದರು. ರಾಹುಲ್ ಮತ್ತು ಅಹಾನ್ ಕೋಲದಲ್ಲಿ ಭಾಗಿಯಾಗಿದ್ದರು. ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ದೈವಸ್ಥಾನದ ಆಡಳಿತ ಮಂಡಳಿಯಲ್ಲಿ ಬಾಲಿವುಡ್ ಕುಟುಂಬ ಸದಸ್ಯರು ಮನವಿ ಮಾಡಿದ್ದರು. ಸಂಜೆ 6 ಗಂಟೆಯ ಸುಮಾರಿಗೆ ಕುತ್ತಾರಿಗೆ ಆಗಮಿಸಿದ ಇವರು ಕೋಲ ಮುಗಿದ ನಂತರ ತೆರಳಿದರು.
Leave A Reply